ರಾಜೀನಾಮೆ ನೀಡಿಲ್ಲ, ಕಟೀಲು ಉಲ್ಟಾ

ಬೆಂಗಳೂರು,ಜೂ.೨೪: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಸೋಮಣ್ಣ ಅವರು ಬೇಡಿಕೆ ಇಡುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸಾಗಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರು ಪ್ರಯತ್ನ ನಡೆಸಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ಬಳ್ಳಾರಿಯಲ್ಲಿಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿಕೆ ನೀಡಿ ನಂತರ ನಾನು ಆ ರೀತಿ ಹೇಳಿಲ್ಲ ಎಂದು ಯು ಟರ್ನ್ ಹೊಡೆದಿರುವುದು ಬಿಜೆಪಿಯಲ್ಲಿ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿಲ್ಲ ಎಂದು ನಳೀನ್‌ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂಬ ವರದಿಗಳು ಸತ್ಯಕ್ಕೆ ದೂರವಾದದ್ದು ಎಂದು ಅವರು ತಿಳಿಸಿದ್ದಾರೆ.
ಇಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಮಾಜಿ ಸಚಿವ ವಿ. ಸೋಮಣ್ಣ ಅವರು ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿರುವ ಬಗ್ಗೆ ಉತ್ತರಿಸುವ ಸಂದರ್ಭದಲ್ಲಿ ಚುನಾವಣಾ ಸೋಲಿನ ನೈತಿಕ ಹೊಣೆಯನ್ನು ನಾನು ಹೊರುತ್ತೇನೆ. ಸೋಲಿನ ಕಾರಣಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ. ರಾಜ್ಯಾಧ್ಯಕ್ಷ ಸ್ಥಾನದ ನನ್ನ ಅವಧಿ ಮುಗಿದಿದ್ದರೂ ನಾನು ಅಧ್ಯಕ್ಷನಾಗಿ ಮುಂದುವರೆದಿದ್ದೇನೆ ಎಂದು ಹೇಳಿದ್ದೇನೆ ಅಷ್ಟೆ. ರಾಜೀನಾಮೆ ನೀಡಿದ್ದೇನೆ ಎಂದು ಹೇಳಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನಾನು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ವರದಿ ಮಾಡಲಾಗಿದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಪುನರುಚ್ಛರಿಸಿದರು.
ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಕಸರತ್ತು ನಡೆದಿರುವಾಗಲೇ
ನಳೀನ್‌ಕುಮಾರ್ ಕಟೀಲುರವರ ಈ ಹೇಳಿಕೆ ಬಗ್ಗೆ ಪಕ್ಷದ ಕೆಲ ನಾಯಕರು ಅಸಾಮಾಧಾನ ವ್ಯಕ್ತಪಡಿಸಿದ್ದು, ನಳೀನ್‌ಕುಮಾರ್ ಕಟೀಲುರವರು ಯು ಟರ್ನ್ ಹೊಡೆಯಲು ಕಾರಣ ಎನ್ನಲಾಗಿದೆ.
ಮಾಜಿ ಸಚಿವ ಸೋಮಣ್ಣ ಸೇರಿದಂತೆ ಹಲವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸಿರುವುದು ಗುಟ್ಟೇನಲ್ಲ. ರಾಜ್ಯಾಧ್ಯಕ್ಷ ರೇಸಿನಲ್ಲಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಮಾಜಿ ಸಚಿವರಾದ ಆರ್. ಅಶೋಕ್, ಡಾ. ಸಿ.ಎನ್ ಅಶ್ವತ್ಥ ನಾರಾಯಣ. ವಿ. ಸುನಿಲ್‌ಕುಮಾರ್ ಇವರುಗಳಿದ್ದು, ವರಿಷ್ಠರು ವಿಧಾನಸಭಾ ಅಧಿವೇಶನದ ನಂತರ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡಲು ನಿರ್ಧರಿಸಿದ್ದಾರೆ. ಈಗಿರುವಾಗ ಈ ಹೊತ್ತಿನಲ್ಲಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳುವ ಅಗತ್ಯವೇನಿತ್ತು ಎಂದು ಕೆಲ ನಾಯಕರು ಕಟೀಲು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಕಟೀಲು ರಾಜೀನಾಮೆ ನೀಡಿದ್ದೇನೆ ಎಂದು ತಾವು ಹೇಳಿಲ್ಲ ಎಂಬ ಸಮಜಾಯಿಷಿಯನ್ನು ನೀಡಿದ್ದಾರೆ.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಭಾರಿ ಪೈಪೋಟಿಯೇ ಇದೆ. ಮಾಜಿ ಸಚಿವ ಆರ್. ಅಶೋಕ್, ಡಾ. ಸಿ.ಎನ್ ಅಶ್ವತ್ಥನಾರಾಯಣ್, ವಿ.ಸೋಮಣ್ಣ, ವಿ. ಸುನಿಲ್‌ಕುಮಾರ್ ಕಣ್ಣಿಟ್ಟಿದ್ದಾರೆ. ಇವರಲ್ಲಿ ಒಬ್ಬರನ್ನು ವರಿಷ್ಠರು, ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಗಳಿವೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಅವರ ೩ ವರ್ಷದ ಅವಧಿ ಮುಗಿದು ೧೦ ತಿಂಗಳಾಗಿದೆ. ವಿಧಾನಸಭಾ ಚುನಾವಣೆಯವರೆಗೂ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸುವ ತೀರ್ಮಾನವನ್ನು ವರಿಷ್ಠರು ಮಾಡಿದ್ದರಿಂದ ಕಟೀಲು ಅವರನ್ನು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಹೀಗಿರುವಾಗ ಕಟೀಲು ಅವರು ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ಬಿಜೆಪಿಯ ಕೆಲ ನಾಯಕರ ಅಭಿಪ್ರಾಯವಾಗಿದೆ. ಹೀಗಾಗಿ ಕಟೀಲು ಹೇಳಿಕೆಗೆ ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಟೀಲು ಅವರು ತಮ್ಮ ಹೇಳಿಕೆ ಬದಲಿಸಲು ಮೂಲ ಕಾರಣ ಎಂದು ಹೇಳಲಾಗಿದೆ.
ಮುಂದಿನ ವಾರ ವಿಪಕ್ಷ ನಾಯಕನ ಆಯ್ಕೆ
ವಿಧಾನಸಭೇಯ ಅಧಿವೇಶನ ಈ ತಿಂಗಳ ೩ ರಿಂದ ಆರಂಭವಾಗಲಿದ್ದು, ಅಷ್ಟರಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಬೇಕಿದೆ. ಮುಂದಿನವಾರ ವಿಪಕ್ಷ ನಾಯಕನ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇವರ ಜತೆಗೆ ಹಿರಿಯ ಶಾಸಕರುಗಳಾದ ಬಸನಗೌಡ ಪಾಟೀಲ್ ಯತ್ನಾಳ್, ಯುವ ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರುಗಳು ವಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿ ಬರುತ್ತಿದೆ. ಅಂತಿಮವಾಗಿ ಈ ತಿಂಗಳಾಂತ್ಯಕ್ಕೆ ನೂತನ ನಾಯಕನ ಆಯ್ಕೆಯಾಗಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.