ರಾಜೀನಾಮೆ ಅಂಗೀಕರಿಸಿ ಸಿಎಂಗೆ ರವಿ ಮನವಿ

ಬೆಂಗಳೂರು, ನ. ೭- ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ಆಯ್ಕೆ ಮಾಡಿದ್ದೇವೆ. ಅಸಂಖ್ಯಾ ಸಾಧಕ ಮುತ್ತುಗಳನ್ನು ಹೆಕ್ಕಿ ತೆಗೆದಂತೆ ೬೫ ಮುತ್ತುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಇನ್ನು ಹಲವು ಮುತ್ತುಗಳು ಪ್ರಶಸ್ತಿಯಿಂದ ಹೊರಗೆ ಉಳಿದಿವೆ. ಆದರೆ ಸೀಮಿತ ಸಂಖ್ಯೆಯಲ್ಲಿ ಪ್ರಶಸ್ತಿ ನೀಡಬೇಕಾಗಿರುವುದರಿಂದ ಕೆಲವೇ ಸಾಧಕರಿಗೆ ಪ್ರಶಸ್ತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಾಡು-ನುಡಿಯ ಸೇವೆ ಮಾಡಿರುವ ಎಲ್ಲ ಮುತ್ತುಗಳಿಗೂ ಪ್ರಶಸ್ತಿ ಸಿಗಲಿದೆ ಎಂದರು.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಯಾರಿಗೂ ವೈಯುಕ್ತಿಕ ಕಾರ್ಯಸೂಚಿ ಇರಲಿಲ್ಲ. ಹಾಗೆಯೇ ಮುಖ್ಯಮಂತ್ರಿಗಳು ಸಹ ಎಲ್ಲವನ್ನು ಆಯ್ಕೆ ಸಮಿತಿಯ ತೀರ್ಮಾನಕ್ಕೆ ಬಿಡುವ ಔದಾರ್ಯ ತೋರಿದರು. ಹಾಗಾಗಿ ಈ ಬಾರಿ ಪ್ರಶಸ್ತಿಗೆ ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಿದ್ದೇವೆ ಎಂದರು.
ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿಗಳು ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಿದರು. ಆಗ ಕೆಲವರು ನಿನಗೆ ಬೇರೆ ಖಾತೆ ಸಿಗಬೇಕು ಎಂದಿದ್ದರು. ಆರಂಭದಲ್ಲಿ ಬೇರೆಯವರು ಹೇಳಿದಾಗ ನನಗೆ ಪಿಚ್ ಎನಿಸಿದ್ದು ನಿಜ. ಆದರೆ ಹೋಗುತ್ತಾ ಹೋಗುತ್ತಾ ಈ ಇಲಾಖೆ ನನಗೆ ಸಂಸ್ಕೃತಿಯ ಮತ್ತೇರಿಸಿತು. ಆನಂದಿಂದ ಸ್ವರ್ಗದಲ್ಲಿ ತೇಲಾಡುವಂತಾಯಿತು. ನಿಜಕ್ಕೂ ಈ ಖಾತೆ ಖುಷಿ ಕೊಟ್ಟಿದ್ದು, ತೃಪ್ತಿ ತಂದಿದೆ ಎಂದರು.
ಕನ್ನಡ ಸಂಸ್ಕೃತಿಯಂತಹ ಒಳ್ಳೆಯ ಖಾತೆ ಇನ್ನೊಂದಿಲ್ಲ. ಸಂಸ್ಕೃತಿಯ ಕಟ್ಟುವ ಕೆಲಸ ನಿಜಕ್ಕೂ ನನಗೆ ತೃಪ್ತಿ ತಂದಿದೆ ಎಂದರು.
ಕನ್ನಡ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡ ಭಾಷೆ ಉಳಿಸಿ ಬೆಳೆಸಿದರೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಸಚಿವ ಸಿ.ಟಿ. ಹೇಳಿದರು.
ನಮ್ಮ ನಾಡು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ನಾಡು. ಇಂತಹ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು ಎಂದರು.
ನಾಡು-ನುಡಿಯ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು. ದುರಾಭಿಮಾನ ಸಲ್ಲದು. ದುರಾಭಿಮಾನದಿಂದ ದ್ವೇಷ ಹುಟ್ಟುತ್ತದೆ. ಸಂಸ್ಕೃತಿ, ಜಾತಿ, ಕುಲ, ಪಂಥವನ್ನು ಮೀರಿದ್ದು. ಜಾತಿ, ಮತದ ಹೆಸರಿನಲ್ಲಿ ಬಡಿದಾಡುವುದನ್ನು ಬಿಟ್ಟು ಕನ್ನಡ ಕಟ್ಟುವ ಕೆಲಸ ಮಾಡೋಣ. ನಿರಾಭಿಮಾನಿ ಕನ್ನಡಿಗರನ್ನು ಬಡಿದೇಳಿಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.

ಕನ್ನಡ ಸಂಸ್ಕೃತಿ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಅವರು ಇಂದು ಸಚಿವ ಸ್ಥಾನ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿರುವ ಸಿ.ಟಿ. ರವಿ ಅವರು ಕೆಲ ದಿನಗಳ ಹಿಂದೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆದರೆ ಮುಖ್ಯಮಂತ್ರಿಗಳನ್ನು ಅದನ್ನು ಅಂಗೀಕರಿಸಿರಲಿಲ್ಲ. ಇಂದ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿ.ಟಿ. ರವಿ ಅವರು, ಇಂದು ಮುಖ್ಯಮಂತ್ರಿಗಳು ತಮ್ಮನ್ನು ಈ ಸಚಿವ ಸ್ಥಾನದಿಂದ ಮುಕ್ತಗೊಳಿಸಬೇಕು. ನನ್ನ ರಾಜೀನಾಮೆಯನ್ನು ಒಪ್ಪಿಕೊಂಡು ಜವಾಬ್ದಾರಿಯಿಂದ ಬಿಡುಗಡೆ ಮಾಡಿ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿ, ಮುಂದೆ ಈ ಖಾತೆ ಜವಾಬ್ದಾರಿಯನ್ನು ಹೊರುವ ಸಚಿವರು ಕನ್ನಡ ಕಟ್ಟುವ ಕೆಲಸ ಮುಂದುವರೆಸಲಿ ಎಂದು ಸಿ.ಟಿ. ರವಿ ಹೇಳಿದರು.
ಇಂದು ಅಂಗೀಕಾರ
ಸಚಿವ ಸ್ಥಾನಕ್ಕೆ ತಾವು ನೀಡಿರುವ ರಾಜೀನಾಮೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಅಂಗೀಕರಿಸಲಿದ್ದಾರೆ. ಈ ಬಗ್ಗೆ ಅವರಿಗೆ ಮನವಿ ಮಾಡಿದ್ದೇವೆ ಎಂದು ಸಚಿವ ಸಿ.ಟಿ. ರವಿ ಅವರು ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.