ರಾಜಾ ರಾಮ್ ಮೋಹನರಾಯ್ ಶ್ರೇಷ್ಟ ಸಮಾಜ ಸುಧಾರಕ

ಕಲಬುರಗಿ:ಮೇ.24: ಹತ್ತೊಂಬತ್ತನೆ ಶತಮಾನದ ಭಾರತದ ಬೌದ್ಧಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಬೆಳವಣಿಗೆಯ ಸುಧಾರಣೆಯಲ್ಲಿ ಅದ್ವೀತಿಯವಾದ ಪಾತ್ರವನ್ನು ವಹಿಸಿದ ರಾಜಾ ರಾಮ್ ಮೋಹನರಾಯ, ‘ಆಧುನಿಕ ಸಮಾಜ ಸುಧಾರಣೆಯ ಪ್ರಾತಃಕಾಲದ ತಾರೆ’ಯಾಗಿದ್ದಾರೆ. ಅವರು ಶ್ರೇಷ್ಟ ಸಮಾಜ ಸುಧಾರಕರು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಜೆ.ಆರ್.ನಗರದ 'ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ'ಯಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 'ರಾಜಾ ರಾಮ್ ಮೋಹನರಾಯ್' ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಗನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಮೋಹನರಾಯ್‍ರು ತಮ್ಮ 15ನೇ ವಯಸ್ಸಿನಲ್ಲಿಯೇ ಮೌಢ್ಯತೆ, ಗೊಡ್ಡು ಸಂಪ್ರದಾಯಗಳ ವಿರುದ್ದ ಪ್ರತಿಭಟಿಸಿದರು. ಇದಕ್ಕಾಗಿ ಸಂಪ್ರದಾಯಶರಣ ಮನೆತನವಾದ ತಮ್ಮ ಮನೆಯನ್ನು ತೊರೆಯಬೇಕಾಯಿತು. ‘ಬ್ರಹ್ಮ ಸಮಾಜ’ವನ್ನು ಸ್ಥಾಪಿಸಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದರು. ಏಕದೇವೋಪಾಸನೆ, ವಿಗ್ರಹ ಪೂಜೆ ವಿರೋಧ, ಸತಿ ಸಹಗಮನ ಪದ್ಧತಿಯ ನಿರ್ಮೂಲನೆ, ಬಹು ಪತ್ನಿತ್ವ ನಿಷೇಧ, ವಿಧವಾ ವಿವಾಹಕ್ಕೆ ಪ್ರೋತ್ಸಾಹದಂತಹ ಅನೇಕ ಕ್ರಾಂತಿಕಾರಕ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ದೇಶದ ಇತಿಹಾಸದಲ್ಲಿ ‘ಪುನರಜ್ಜೀವನದ ಪಿತಾಮಹ’ ಎಂದು ಕರೆಸಿಕೊಂಡಿದ್ದಾರೆ ಎಂದರು.

ಅಕಾಡೆಮಿಯ ನಿರ್ದೇಶಕ ದತ್ತು ಹಡಪದ ಮಾತನಾಡಿ, ರಾಜಾ ರಾಮ್ ಮೋಹನರಾಯ ಅವರು ಸಾಮಾಜಿಕ ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿ ಸಾಕಷ್ಟು ವಿರೋಧ, ನೊವುಗಳನ್ನು ಅನುಭವಿಸಿ, ಇವೆಲ್ಲವುಗಳನ್ನು ಮೆಟ್ಟಿ ನಿಂತು ಕ್ರಾಂತಿ ಮಾಡಿದ್ದು ಸಾಮಾನ್ಯವಾದದ್ದಲ್ಲ ಎಂದು ನುಡಿದರು.

  ಕಾರ್ಯಕ್ರಮದಲ್ಲಿ ಡಾ.ಸತೀಶ್ ಟಿ.ಸಣಮನಿ, ಕಸಾಪ ಉತ್ತರವ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಕಂಪ್ಯೂಟರ ಸಂಸ್ಥೆಯ ನಿರ್ದೇಶಕ ಇಸ್ಮೈಲ್ ಅತ್ತರ್, ಪ್ರಮುಖರಾದ ತಿರುಪತಿ, ಪ್ರವೀಣ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.