ರಾಜಾಸ್ತಾನ ಪಟಾಕಿ ಮಾರಾಟ ನಿಷೇಧ

ಜೈಪುರ, ನ. ೨- ಕೊರೊನಾ ರೋಗಿಗಳು ಮತ್ತು ಸಾರ್ವಜನಿಕದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ದೀಪಾವಳಿಯ ಸಂದರ್ಭದಲ್ಲಿ ರಾಜಸ್ತಾನ ಸರ್ಕಾರ ಪಟಾಕಿ ಮಾರಾಟದ ಮೇಲೆ ನಿಷೇಧವೇರಿದೆ.
ದೀಪಾವಳಿ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರವನ್ನು ರಾಜಸ್ಥಾನ ಸರ್ಕಾರ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಪಟಾಕಿ ಮಾರಾಟ ಮಾಡದಂತೆ ಸೂಚಿಸಿದೆ.
ಪಟಾಕಿಯಿಂದ ವಾಯುಮಾಲಿನ್ಯ ಉಂಟಾಗುವ ಹಿನ್ನೆಲೆಯಲ್ಲಿ ಮುನ್ನೇಚ್ಚರಿಕೆ ಕ್ರಮವಾಗಿ ಈನಿರ್ಧಾರವನ್ನು ಪ್ರಕಟಿಸಿರುವುದು ಪಟಾಕಿ ಪ್ರಿಯರಿಗೆ ನಿರಾಸೆ ತರಿಸಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹೆಚ್ಚಿನ ಹೊಗೆ ಹೊರಸೂಸುವ ವಾಹನಗಳ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು. ಶಾಲಾ -ಕಾಲೇಜುಗಳನ್ನು ನವೆಂಬರ್ ೧೬ರವರೆವಿಗೂ ತೆರೆಯದಿರಲು ಇದೇ ಸಂದರ್ಭದಲ್ಲಿ ಸರ್ಕಾರ ತೀರ್ಮಾನ ಮಾಡಿದೆ.
ವಾರ್ ಪಾರ್ ಪ್ಯೂರ್ ಅಭಿಯಾವ
ಕೊರೊನಾ ಮಹಾಮಾರಿಯ ಉಪಟಳದಿಂದ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲು ನೋ ಮಾಸ್ಕ್, ನೋ ಎಂಟ್ರಿ ವಾರ್ ಪಾರ್ ಪ್ಯೂರ್ ಎಂಬ ಅಭಿಯಾನವನ್ನು ರಾಜಸ್ಥಾನ ಸರ್ಕಾರ ಆರಂಭಿಸುತ್ತಿದೆ. ಇದೇ ವೇಳೆ ಅನ್ ಲಾಕ್ ೬ರ ಮಾರ್ಗಸೂಚಿಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಕೊರೊನಾ ವೈರಸ್ ಸೋಂಕಿತ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಪಟಾಕಿ ಮಾರಾಟ ನಿಷೇಧ ನಿರ್ಧಾರವನ್ನು ಮಾಡಲಾಗಿದೆ.
ಪಟಾಕಿ ಸಿಡಿಸದಿರಿ
ಕೊರೊನಾ ಮಹಾಮಾರಿಯ ಅಟ್ಟಹಾಸದ ಈ ಸಂದರ್ಭದಲ್ಲಿ ಜನರು ದೀಪಾವಳಿ ಎಂದು ಪಟಾಕಿ ಬಳಕೆ ಮಾಡುವುದನ್ನು ಕೈ ಬಿಡಬೇಕು ಎಂದು ಮುಖ್ಯಮಂತ್ರಿ ಗೆಹ್ಲೊಟ್ ಮನವಿ ಮಾಡಿದ್ದಾರೆ.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲೂ ವಾಯುಮಾಲಿನ್ಯ ಹೆಚ್ಚಾಗಿದ್ದು, ದೆಹಲಿ ಸರ್ಕಾರವು ಕೂಡ ಪಟಾಕಿ ನಿಷೇಧ ಮಾಡುವ ಚಿಂತನೆ ನಡೆಸಿದೆ. ಈ ಹಿಂದೆಯೂ ದೆಹಲಿಯಲ್ಲಿ ಪಟಾಕಿಗಳ ಮೇಲೆ ಹಬ್ಬಗಳ ಸಂದರ್ಭಗಳಲ್ಲಿ ನಿಷೇಧ ವಿಧಿಸಲಾಗಿತ್ತು.