ರಾಜಾಸ್ತಾನ್ ‘ರಾಯಲ್ಸ್’ ಆರ್ಭಟಕ್ಕೆ ತಲೆಬಾಗಿದ ಚೆನೈ ಸೂಪರ್ ಕಿಂಗ್ಸ್

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಶುಭಾರಂಭ ಮಾಡಿದೆ. ರಾಜಸ್ಥಾನ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 16 ರನ್ ಗಳ ಗೆಲುವು ಸಾಧಿಸಿದೆ. ಈ ಜಯ ದೊಂದಿಗೆ ರಾಜಸ್ಥಾನ ಐಪಿಎಲ್ ಇತಿಹಾಸ ದಲ್ಲಿ ಟೂರ್ನಿಯ ಮೊದಲ ಪಂದ್ಯ ದ ಗೆಲುವಿನ ದಾಖಲೆಯನ್ನು ಹಾಗೆ ಉಳಿಸಿಕೊಂಡಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ರಾಜಸ್ಥಾನ ತಂಡ ಇದುವರೆಗೂ ಒಂದು ಪಂದ್ಯ ಕೂಡಾ ಸೋತಿಲ್ಲ. ಇತ್ತ ಚೆನ್ನೈ ಆಡಿರುವ 2 ನೇ ಪಂದ್ಯ ದಲ್ಲಿ ಸೋಲಿನ ಆಘಾತ ಎದುರಿಸಿತು. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಣಿಸಿದ್ದ ಚೆನ್ನೈ, 2 ನೇ ಪಂದ್ಯದಲ್ಲಿ ಸೋಲಿಗೆ ಶರಣಾಯಿತು.


ತೇವಾಟಿಯ ಮೋಡಿ:
ರಾಜಸ್ಥಾನ ನೀಡಿದ 217 ರನ್ ಗಳ ದೊಡ್ಡ ಗುರಿ ಬೆನ್ನತ್ತಿದ ಚೆನ್ನೈ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿ ಯಾಯಿತು. ಮೊದಲ ವಿಕೆಟ್ ಗೆ ಮುರಳಿ ವಿಜಯ್ ಹಾಗೂ ವಾಟ್ಸನ್ ಜೋಡಿ 56 ರನ್ ಗಳಿಸಿದರು. 33 ರನ್ ಗಳಿಸಿ ಮುನ್ನುಗ್ಗುತ್ತಿದ್ದ ವಾಟ್ಸನ್ ಗೆ ಲೆಗ್ ಸ್ಪಿನ್ನರ್ ರಾಹುಲ್ ತೇವಾಟಿಯ ಶಾಕ್ ನೀಡಿದರು. ತೇವಾಟಿಯ ಬಾಲ್ ನ್ನು ಗಮನಿಸುವ ಲ್ಲಿ ಎಡವಿದ ವಾಟ್ಸನ್ ಕ್ಲೀನ್ ಬೌಲ್ಡ್ ಆದರು. ನಂತರದ 2 ರನ್ ಅಂತರದಲ್ಲಿ ಮುರಳಿ ವಿಜಯ್ (21) ಔಟ್ ಆದರು. ಸ್ಯಾಮ್ ಕರ್ರನ್ ವೇಗದ 17 ರನ್ ಗಳಿಸಿ ತೇವಾಟಿಯ ಗೆ ವಿಕೆಟ್ ಒಪ್ಪಿಸಿದರು. ನಂತರದ ಎಸೆತದಲ್ಲಿ ಋತುರಾಜ್ ಗಾಯಕ್ವಾಡ್ ಡಕ್ ಔಟ್ ಆದರು. ತೇವಾಟಿಯ 3 ವಿಕೆಟ್ ಪಡೆದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ ಡುಪ್ಲೆಸಿ ಭರ್ಜರಿ ಬ್ಯಾಟಿಂಗ್ ನಡೆಸಿ ಗಮನಸೆಳೆದರು. ಆರಂಭದಲ್ಲಿ ನಿಧಾನವಾಗಿ ಆಡಿದ ಡುಪ್ಲೆಸಿ, ಬಳಿಕ ಸಿಡಿದರು. ಡುಪ್ಲೆಸಿ 37 ಎಸೆತಗಳಲ್ಲಿ 72 ರನ್ ಗಳಿಸಿದರು. ಧೋನಿ ಜೊತೆ 6ನೇ ವಿಕೆಟ್ ಗೆ 65 ರನ್ ಸೇರಿಸಿದರು.

24 ಎಸೆತದಲ್ಲಿ 63 ರನ್ ಬಂತು:
ಕೊನೆಯ 4 ಓವರಲ್ಲಿ ಚೆನ್ನೈ ಗೆಲುವಿಗೆ 79 ರನ್ ಗಳು ಬೇಕಿತ್ತು. ಈ ಅವಧಿಯಲ್ಲಿ ಬಿರುಸಿನ ಆಟಕ್ಕೆ ಮುಂದಾದ ಡುಪ್ಲೆಸಿ ಆಕರ್ಷಕ ಬ್ಯಾಟಿಂಗ್ ನಡೆಸಿದರು. ಧೋನಿ ಕೊನೆಯ ಓವರಲ್ಲಿ ಸತತ 3 ಸಿಕ್ಸರ್ ಸಿಡಿಸಿದರು. ಒಟ್ಟಾರೆ 24 ಎಸೆತಗಳಲ್ಲಿ ಚೆನ್ನೈ 63 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮ ವಾಗಿ ಚೆನ್ನೈ 20 ಓವರಲ್ಲಿ 6 ವಿಕೆಟ್ ಗೆ 200 ರನ್ ಗಳಿಸಿತು.

ರಾಯಲ್ಸ್ ಗೆ ಆರಂಭಿಕ ಆಘಾತ:

ಬ್ಯಾಟಿಂಗ್ ಪಿಚ್ ಆಗಿರುವ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ, ರಾಜಸ್ಥಾನ ಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ದೊಡ್ಡ ಮೊತ್ತದ ನಿರೀಕ್ಷೆಯಲ್ಲಿ ಬ್ಯಾಟಿಂಗ್ ಗೆ ಇಳಿದ ರಾಜಸ್ಥಾನ ತಂಡಕ್ಕೆ ಯಶಸ್ವಿ ಜೈಸ್ವಾಲ್ (6) ಔಟ್ ಮಾಡುವ ಮೂಲಕ ಆರಂಭಿಕ ಆಘಾತ ಎದುರಾಯಿತು.

ಸಂಜು ಸ್ಯಾಮ್ಸನ್ ಸಿಕ್ಸರ್ ಸುರಿಮಳೆ:

2 ನೇ ವಿಕೆಟ್ ಗೆ ನಾಯಕ ಸ್ಮಿತ್ ಜೊತೆಗೂಡಿದ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಚೆನ್ನೈ ಬೌಲರ್‌ಗಳ ನ್ನು ಗೋಳು ಹೊಯ್ದುಕೊಂಡ ಸಂಜು ಬೌಂಡರಿ, ಸಿಕ್ಸರ್ ಮೂಲಕ ಗಮನಾರ್ಹ ಬ್ಯಾಟಿಂಗ್ ನಡೆಸಿದರು. 231.25ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ ಸಂಜು, 32 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ನೆರವಿನಿಂದ 74 ರನ್ ಗಳಿಸಿ ಔಟಾದರು.
ಮಧ್ಯಮ ಕ್ರಮಾಂಕದಲ್ಲಿನ ಬ್ಯಾಟ್ಸ್‌ಮನ್ ಗಳು ಹಠಾತ್ ನೇ ಕುಸಿದರು. ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಕಂಡು ಬರಲಿಲ್ಲ. ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿದ್ದರೆ, ಮತ್ತೊಂದೆಡೆ ನಾಯಕ ಸ್ಮಿತ್ ಗಟ್ಟಿಯಾಗಿ ನೆಲೆಯೂರಿದರು. ಚೆನ್ನೈ ಬೌಲರ್ ಗಳನ್ನು ದಂಡಿಸಿದ ಸ್ಮಿತ್ 47 ಎಸೆತಗಳಲ್ಲಿ 69 ರನ್ ಗಳಿಸಿದರು.

ಕೊನೆಯ ಓವರಲ್ಲಿ ಜೋಫ್ರಾ ಆರ್ಚರ್ ಕೇವಲ 8 ಎಸೆತಗಳಲ್ಲಿ 27 ರನ್ ಗಳಿಸಿದ್ದರಿಂದ ರಾಜಸ್ಥಾನ. 200 ರ ಗಡಿ ದಾಟಿತು. ಆರ್ಚರ್ ಆಕರ್ಷಕ 4 ಸಿಕ್ಸರ್ ಸಿಡಿಸಿದರು. ಅಂತಿಮವಾಗಿ ರಾಜಸ್ಥಾನ 20 ಓವರಲ್ಲಿ 7 ವಿಕೆಟ್ ಗೆ 216 ರನ್ ಗಳಿಸಿತು. ಚೆನ್ನೈ ಪರ ಸ್ಯಾಮ್ ಕರ್ರನ್ 3 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ 33 ಸಿಕ್ಸರ್:

ಐಪಿಎಲ್ ಪಂದ್ಯ ಒಂದರಲ್ಲಿ ಗರಿಷ್ಠ ಸಿಕ್ಸರ್ ಬಂದಿರುವುದು ಇದು 2 ನೇ ಬಾರಿಯಾಗಿದೆ. ರಾಜಸ್ಥಾನ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಒಟ್ಟು 33 ಸಿಕ್ಸ್ ಸಿಡಿಯಿತು. ಇದರಲ್ಲಿ ರಾಜಸ್ಥಾನ 17 ಸಿಕ್ಸ್ ಸಿಡಿಸಿದರೆ, ಚೆನ್ನೈ 16 ಸಿಕ್ಸ್ ಬಾರಿಸಿದೆ. 2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಆರ್ ಸಿಬಿ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ 33 ಸಿಕ್ಸ್ ಸಿಡಿದಿದ್ದವು. ಐಪಿಎಲ್ ಇತಿಹಾಸದಲ್ಲಿ ಇದು 2 ನೇ ಬಾರಿಯಾಗಿದೆ.

ರಾಜಸ್ಥಾನ ರಾಯಲ್ಸ್ 20 ಓವರಲ್ಲಿ 216/7
ಯಶಸ್ವಿ ಜೈಸ್ವಾಲ್ ಸಿ ಮತ್ತು ಬಿ ಚಹರ್ 06(06)
ಸ್ಟೀವನ್ ಸ್ಮಿತ್ ಸಿ ಕೇದಾರ್ ಬಿ ಸ್ಯಾಮ್ ಕರ್ರನ್ 69(47)
ಸಂಜು ಸ್ಯಾಮ್ಸನ್ ಸಿ ಚಹರ್ ಬಿ ಎನ್ ಗಿಡಿ 74(32)
ಡೇವಿಡ್ ಮಿಲ್ಲರ್ ರನೌಟ್ (ಋತುರಾಜ್/ಕೇದಾರ್) 00(00)
ರಾಬಿನ್ ಉತ್ತಪ್ಪ ಸಿ ಡುಪ್ಲೆಸಿ ಬಿ ಚಾವ್ಲಾ 05(09)
ರಾಹುಲ್ ತೇವಾಟಿಯ ಎಲ್ ಬಿ ಬಿ ಸ್ಯಾಮ್ ಕರ್ರನ್ 10(08)
ರಿಯಾನ್ ಪರಾಗ್ ಸಿ ಧೋನಿ ಬಿ ಸ್ಯಾಮ್ ಕರ್ರನ್ 06(04)
ಟಾಮ್ ಕರ್ರನ್ ಅಜೇಯ 10(09)
ಜೋಫ್ರಾ ಆರ್ಚರ್ ಅಜೇಯ 27(08)
ಇತರೆ : 09( ಬೈ 01, ವೈಡ್ 05, ನೋಬಾಲ್ 03)

ವಿಕೆಟ್ ಪತನ: 1-11(ಯಶಸ್ವಿ), 2-132(ಸಂಜು), 3-134(ಮಿಲ್ಲರ್), 4-149(ಉತ್ತಪ್ಪ), 5-167(ತೇವಾಟಿಯ), 6-173(ರಿಯಾನ್), 7-178(ಸ್ಮಿತ್)

ಬೌಲಿಂಗ್: ದೀಪಕ್ ಚಹರ್ 4-0-31-1, ಸ್ಯಾಮ್ ಕರ್ರನ್ 4-0-31-3, ಲುಂಗಿ ಎನ್ ಗಿಡಿ 4-0-56-1, ರವೀಂದ್ರ ಜಡೇಜಾ 4-0-40-0, ಚಾವ್ಲಾ 4-0-55-1

ಚೆನ್ನೈ ಸೂಪರ್ ಕಿಂಗ್ಸ್ 20 ಓವರಲ್ಲಿ 200/6
ಮುರಳಿ ವಿಜಯ್ ಸಿ ಟಾಮ್ ಕರ್ರನ್ ಬಿ ಶ್ರೇಯಸ್ ಗೋಪಾಲ್ 21(21)
ಶೇನ್ ವಾಟ್ಸನ್ ಬಿ ತೇವಾಟಿಯ 33(21)
ಡುಪ್ಲೆಸಿ ಸಿ ಸಂಜು ಬಿ ಆರ್ಚರ್ 72(37)
ಸ್ಯಾಮ್ ಕರ್ರನ್ ಸ್ಟಂಪ್ ಸಂಜು ಸ್ಯಾಮ್ಸನ್ ಬಿ ತೇವಾಟಿಯ 17(06)
ಋತುರಾಜ್ ಸ್ಟಂಪ್ ಸಂಜು ಸ್ಯಾಮ್ಸನ್ ಬಿ ತೇವಾಟಿಯ 00(01)
ಕೇದಾರ್ ಜಾಧವ್ ಸಿ ಸಂಜು ಬಿ ಟಾಮ್ ಕರ್ರನ್ 22(16)
ಧೋನಿ ಅಜೇಯ 29(17)
ರವೀಂದ್ರ ಜಡೇಜಾ ಅಜೇಯ 01(02)

ಇತರೆ : 05(ಲೆಗ್ ಬೈ 01, ವೈಡ್ 03, ನೋಬಾಲ್ 01)

ವಿಕೆಟ್ ಪತನ: 1-56(ವಾಟ್ಸನ್), 2-58(ಮುರಳಿ), 3-77(ಸ್ಯಾಮ್ ಕರ್ರನ್), 4-77(ಋತುರಾಜ್), 5-114(ಕೇದಾರ್), 6-179(ಡುಪ್ಲೆಸಿ)

ಬೌಲಿಂಗ್: ಜೈದೇವ್ ಉನಾದ್ಕತ್ 4-0-44-0, ಜೋಫ್ರಾ ಆರ್ಚರ್ 4-0-26-1, ಶ್ರೇಯಸ್ ಗೋಪಾಲ್ 4-0-38-1, ಟಾಮ್ ಕರ್ರನ್ 4-0-54-1, ರಾಹುಲ್ ತೇವಾಟಿಯ 4-0-27-3

ಪಂದ್ಯ ಶ್ರೇಷ್ಠ: ಸಂಜು ಸ್ಯಾಮ್ಸನ್