ರಾಜಾದ್ಯಂತ 10ರಂದು ಕರವೇ ಆನ್‌ಲೈನ್ ಪ್ರತಿಭಟನೆ

ದಾವಣಗೆರೆ.ಜೂ.೪; ಕರ್ನಾಟಕ ರಕ್ಷಣಾ ವೇದಿಕೆಯಿಂದ ಇದೇ 10ರಂದು ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರಿ ಬಿಡಿ ಎನ್ನುವ ಘೋಷಣೆ ಮೂಲಕ ಆನ್‌ಲೈನ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9ರಿಂದ ಆನ್‌ಲೈನ್ ಪ್ರತಿಭಟನೆ ನಡೆಯಲಿದ್ದು, ರಾಜಾಧ್ಯಕ್ಷ ಟಿ.ಎ.ನಾರಾಯಣಗೌಡ ರಾಜ್ಯದ ಜನತೆ ಪರವಾಗಿ ಹಕ್ಕೋತ್ತಾಯ ಮಂಡಿಸಲಿದ್ದಾರೆ.ರಾಜ್ಯದ ಪ್ರತಿಯೊಬ್ಬರಿಗೂ ಜೂನ್ ತಿಂಗಳ ಅಂತ್ಯದೊಳಗೆ ಮೊದಲನೇ ಡೋಸ್ ಕೋವಿಡ್ ಲಸಿಕೆ ಮತ್ತು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಎರಡನೇ ಡೋಸ್ ಉಚಿತವಾಗಿ ನೀಡಬೇಕು. ಚುನಾವಣಾ ಬೂತ್‌ಗಳು, ಪೊಲೀಯೋ ವ್ಯಾಕ್ಸಿನ್ ಬೂತ್ ರಚನೆ ಮಾಡುವ ಹಾಗೆ ನಾಗರಿಕರು ನಡೆದು ಹೋಗುವಷ್ಟು ಹತ್ತಿರದಲ್ಲೇ ಲಸಿಕೆ ಬೂತ್ ಸ್ಥಾಪಿಸಿ, ಜನರನ್ನು ಕಾಯಿಸದೆ, ಸತಾಯಿಸದೆ ಲಸಿಕೆಗಳನ್ನು ನೀಡಬೇಕು ಎಂಬುದು ವೇದಿಕೆಯ ಹಕ್ಕೊತ್ತಾಯವಾಗಿರಲಿದೆ.
ನಾಡಿನ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಈ ಪ್ರತಿಭಟನೆಯನ್ನು ಬೆಂಬಲಿಸುವ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಸಾಮಾನ್ಯ ಜನರು ತಾವು ಇರುವ ಸ್ಥಳಗಳಲ್ಲೇ ತಮ್ಮ ತಮ್ಮ ಮನೆಗಳಿಂದ ಹೊರಬಂದು, ಪ್ರಚಾರ ಫಲಕಗಳನ್ನು ಪ್ರತಿಭಟಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.