ರಾಜಾಕಾಲುವೆ ಒತ್ತುವರಿ ತೆರವಿಗೆ ಡಿಕೆಶಿ ಖಡಕ್ ಎಚ್ಚರಿಕೆ

ಮಹದೇವಪುರದ ಯಮಲೂರು ಬಳಿ ನಡೆಯುತ್ತಿರುವ ರಾಜಾಕಾಲುವೆ ನಿರ್ಮಾಣ ಕಾಮಗಾರಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವೀಕ್ಷಿಸಿದರು.

ಬೆಂಗಳೂರು,ಜೂ.೮:ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ರಾಜಾಕಾಲುವೆಗಳನ್ನು ತಕ್ಷಣ ತೆರವು ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ನಗರ ಪ್ರದಕ್ಷಿಣೆ ನಡೆಸಿದರು.ಮಳೆಗಾಲದ ವೇಳೆ ಬೆಂಗಳೂರು ನಗರದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇದಕ್ಕೆ ಕಾರಣ ರಾಜಾಕಾಲುವೆಗಳ ಒತ್ತುವರಿ ಕಾರಣ ಎಂಬುದು ಭೇಟಿಯ ವೇಳೆ ಸಾರ್ವಜನಿಕರು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಕೆ. ಶಿವಕುಮಾರ್ ದಿವ್ರಶ್ರೀ ಕಾಲುವೆ ಒತ್ತುವರಿಯಾಗಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
೧೨ ಮೀ. ಉದ್ದದ ರಾಜಾಕಾಲುವೆ ಜಾಗದಲ್ಲಿ ೭ ಮೀ.ಒತ್ತುವರಿ ಮಾಡಿಕೊಳ್ಳಲಾಗಿದೆ. ಅದು ಹೀಗೆ ಮುಂದುವರೆದರೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ತಕ್ಷಣ ಒತ್ತುವರಿ ಜಾಗವನ್ನು ತೆರವುಗೊಳಿಸಿ ರಾಜಾಕಾಲುವೆ ತ್ವರಿತವಾಗಿ ನಿರ್ಮಿಸಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಸ್ಥಳದಲ್ಲೇ ಆದೇಶ ನೀಡಿದರು.
ಇದಕ್ಕೂ ಮುನ್ನ ಯಮಲೂರು ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ವ್ಯವಸ್ಥೆಯನ್ನು ವೀಕ್ಷಿಸಿ ತ್ವರಿತ ಗತಿಯಲ್ಲಿ ಕಾiಗಾರಿಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಳಿಕ ಬೆಳ್ಳಂದೂರು ಕೆರೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳ್ಳಂದೂರು ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ತಕ್ಷಣ ಅದನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ, ಬಿಡಿಎ ನೂತನ ಅಧ್ಯಕ್ಷ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಎಂಆರ್ ಸಿಎಲ್ ಎಂಡಿ ಅಜುಂ ಪರ್ವೇಜ್ಸೇರಿದಂತೆ ವಿಶೇಷ ಆಯುಕ್ತರು ಹಾಗೂ ವಲಯ ಅಧಿಕಾರಿಗಳು ಸೇರಿದಂತೆ ಪ್ರಮುಖರಿದ್ದರು.

ಅಭಿಮಾನಿಗಳ ಸ್ವಾಗತ..!
ಯಮಲೂರು ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಸ್ಟ್ರಾಮ್ ವಾಟರ್ ಡ್ರೈನ್ ವೀಕ್ಷಣೆ ಮಾಡುವ ರಸ್ತೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಆನಂತರ ಡಿಕೆಶಿ ಅವರಿಂದ ಪುಷ್ಪಗುಚ್ಛ ಸ್ವೀಕರಿಸಿದರು.

ಸಂಚಾರ ದಟ್ಟಣೆ…!
ಬೆಳಿಗ್ಗೆ ೧೧ ಗಂಟೆಗೆ ಡಿಕೆಶಿ ನಗರ ಪ್ರದಕ್ಷಿಣೆ ಆರಂಭಿಸಿದ ಹಿನ್ನೆಲೆ ಬೆಂಗಳೂರಿನ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಕಂಡುಬಂತು. ಇಲ್ಲಿನ ನೆಹರು ತಾರಾಲಯ ರಸ್ತೆ, ಎಚ್ ಎಎಲ್ ಮಾರ್ಗ, ಯಮಲೂರು ಜಂಕ್ಷನ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದವು.