ರಾಜಹಂಸ ಬಸ್ ಪಲ್ಟಿ ಪ್ರಯಾಣಿಕರು ಪಾರು

ಶಿವಮೊಗ್ಗ,ಏ.೧- ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿ ಸಿ ರಾಜಹಂಸ ಬಸ್ ಪಲ್ಟಿಯಾಗಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಪಾರಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಕ್ರಾಸ್ ಬಳಿ ನಡೆದಿದೆ.
ಬೆಂಗಳೂರಿನಿಂದ ತೀರ್ಥಹಳ್ಳಿ ಮೂಲಕ ಕುಪ್ಪಳ್ಳಿಗೆ ಇಂದು ಬೆಳಿಗ್ಗೆ ತೆರಳುತ್ತಿದ್ದ ರಾಜಹಂಸ ಬಸ್, ಮಾಳೂರು ಕ್ರಾಸ್ ಬಳಿ ತಿರುವು ಪಡೆಯುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಬಸ್ ನಲ್ಲಿದ್ದ ಕೆಲ ಪ್ರಯಾಣಿಕರು ಸೇರಿದಂತೆ ಚಾಲಕ, ನಿರ್ವಾಹಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಬಸ್ ಪಲ್ಟಿಯಾಗಿದ್ದನ್ನು ಕಂಡ ಸ್ಥಳೀಯರು, ಬಸ್ಸಿನಲ್ಲಿದ್ದಂತ ಪ್ರಯಾಣಿಕರು, ಚಾಲಕ, ನಿರ್ವಾಹಕರನ್ನು ರಕ್ಷಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ಪ್ರಯಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಈ ಸಂಬಂಧ ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.