ರಾಜಸ್ಥಾನ ಸರ್ಕಾರ ಆರೋಗ್ಯ ಹಕ್ಕು ಮಸೂದೆ ಹಿಂಪಡೆಯುವಂತೆ ಖಾಸಗಿ ವೈದ್ಯರ ಒತ್ತಾಯ

ಅಥಣಿ:ಮಾ.28: ರಾಜಸ್ಥಾನ ರಾಜ್ಯ ಸರ್ಕಾರ ಖಾಸಗಿ ವೈದ್ಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಲ್ಪಡುತ್ತಿರುವ ಆರೋಗ್ಯ ಹಕ್ಕು ಮಸೂದೆ ಕಾಯ್ದೆಯನ್ನು ವಿರೋಧಿಸಿ ಮತ್ತು ವೈದ್ಯರ ಮೇಲಿನ ಹಲ್ಲೆಯನ್ನ ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿ ಅಥಣಿ ಪಟ್ಟಣದ ಎಲ್ಲ ಖಾಸಗಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಜನರಿಗೆ ಆರೋಗ್ಯ ಸೇವೆ ನೀಡಿದರು.
ಭಾರತೀಯ ವೈದ್ಯಕೀಯ ಸಂಘ ಅಥಣಿ ಶಾಖೆಯ ಡಾ. ಸ್ಮಿತಾ ರವಿ ಚೌಗಲಾ ನೇತೃತ್ವದಲ್ಲಿ ಸ್ಥಳೀಯ ಶಾಸಕ ಮಹೇಶ ಕುಮಟಳ್ಳಿ ಮತ್ತು ಅಥಣಿ ತಹಶೀಲ್ದಾರ ಬಿ. ಎಸ್ ಕಡಕಬಾವಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ವೈದ್ಯ ಡಾ. ಎ. ಎ ಪಾಂಗಿ ರಾಜಸ್ಥಾನದಲ್ಲಿ ರಾಜ್ಯ ಸರ್ಕಾರ ಆರೋಗ್ಯ ಹಕ್ಕು ಮಸೂದೆಯನ್ನು ವಿಧಾನಸಭೆಯು ಇತ್ತೀಚೆಗೆ ಅಂಗೀಕರಿಸಿದೆ. ಈ ಕಾನೂನು ಖಾಸಗಿ ವಲಯದ ಆಸ್ಪತ್ರೆಗಳೂ ಸಹ ತುರ್ತು ಸಂದರ್ಭಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಯನ್ನು ಒದಗಿಸುವುದನ್ನು ಒಳಗೊಂಡಿದೆ. ಆದರೆ “ತುರ್ತು” ಪರಿಸ್ಥಿತಿ ಅಂದರೆ ಏನೆಂದು ವ್ಯಾಖ್ಯಾನ ನೀಡುವಲ್ಲಿ ಈ ಪ್ರಸ್ತುತ ಕಾನೂನು ವಿಫಲವಾಗಿದೆ. ರಾಜಸ್ಥಾನದ ವೈದ್ಯಕೀಯ ವೃತ್ತಿಯು ಮತ್ತು ಸಾರ್ವಜನಿಕ ಆರೋಗ್ಯವು ಆತಂಕಕ್ಕೊಳಗಾಗಿದೆ. ಸಾರ್ವಜನಿಕರ ಆರೋಗ್ಯದ ಹಕ್ಕು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಜವಾಬ್ದಾರಿಯಾಗಿದ್ದು ಇದರ ಹೊಣೆ ಸರ್ಕಾರಿ ಆಸ್ಪತ್ರೆಗಳು ಮತ್ತು ಸಂಸ್ಥೆಗಳು ಹೊರಬೇಕಾಗಿವೆ. ಈ ಹೊಣೆಗಾರಿಕೆಯನ್ನು ಖಾಸಗಿಯವರಿಗೆ ವರ್ಗಾಯಿಸುವ ಮೂಲಕ ಸರ್ಕಾರವು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಕೆಟ್ಟ ಕಾನೂನಾಗಿರುವುಲ್ಲದೆ , ಈಗಾಗಲೇ ದುರ್ಬಲವಾಗಿರುವ ಖಾಸಗಿ ಆರೋಗ್ಯ ವ್ಯವಸ್ಥೆಯ ಕುಸಿತ ಸೇರಿದಂತೆ ಅನೇಕ ಅನಿರೀಕ್ಷಿತ ಪರಿಣಾಮಗಳನ್ನು ಇದು ಉಂಟುಮಾಡುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಅಂಗೀಕರಿಸಿರುವ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ಅಲ್ಲಿನ ಖಾಸಗಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ ರಾಜಸ್ಥಾನ ಸರ್ಕಾರ ಜಾರಿಗೆ ತರುತ್ತಿರುವ ಈ ಮಸೂದೆ ಖಾಸಗಿ ವೈದ್ಯರಿಗೆ ಮಾರಕವಾಗಿದ್ದು, ಈ ಕಾಯ್ದೆಯ ಪರಮರ್ಶೆಗೆ ಮಾಡಲಾಗಿರುವ ಸಮಿತಿಯು ಅವೈಜ್ಞಾನಿಕವಾಗಿದ್ದು,ದೇಶದ ಎಲ್ಲಾ ವೈದ್ಯರು ಮತ್ತು ಆಸ್ಪತ್ರೆಗಳು ಆರೋಗ್ಯ ರಕ್ಷಣೆ ಮತ್ತು ಖಾಸಗಿ ವಲಯದ ಉಳಿವಿಗಾಗಿ ಜೊತೆಗೆ ರಾಜ್ಯದ ಜವಾಬ್ದಾರಿಯನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಆಂದೋಲನದ ಹಾದಿ ಹಿಡಿದಿವೆ. ರಾಜಸ್ಥಾನ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಭಾರತೀಯ ವೈದ್ಯರ ಸಂಘ ಅಥಣಿ ಶಾಖೆಯ ಅಧ್ಯಕ್ಷೆ ಡಾ. ಸ್ಮಿತಾ ರವಿ ಚೌಗಲಾ ಮಾತನಾಡಿ ಭಾರತದ ಶೇ.80 ರಷ್ಟು ಆರೋಗ್ಯ ಸೇವಾ ಸೌಲಭ್ಯಗಳ ಹೊಣೆ ಹೊತ್ತು ರಾಷ್ಟ್ರ ನಿರ್ಮಾಣ ಮತ್ತು ಆರೋಗ್ಯ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಖಾಸಗಿ ಕ್ಷೇತ್ರಕ್ಕೆ ಮಾರಕವಾಗಿರುವ ಈ ಕ್ರಮವು ನಮ್ಮ ರಾಷ್ಟ್ರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಿರುವುದಿಲ್ಲ. ವೈದ್ಯರ ಮೇಲೆ ಸರ್ಕಾರ ನಡೆಸಿದ ಪೆÇೀಲೀಸ್ ದಬ್ಬಾಳಿಕೆಯು ನಮ್ಮೆಲ್ಲರನ್ನು ದಂಗು ಬಡಿಸಿದೆ. ಭಾರತೀಯ ವೈದ್ಯಕೀಯ ಸಂಘವು ಇದನ್ನು ಖಂಡಿಸುವುದಲ್ಲದೆ ರಾಜಸ್ಥಾನ ಸರ್ಕಾರವು ಈ ಕಪ್ಪು ಕಾನೂನನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಡಾ.ರವಿ ಚೌಗಲಾ, ಡಾ.ರಾಮ ಕುಲಕರ್ಣಿ, ಡಾ. ಸಿ. ಎ ಸಂಕ್ರಟ್ಟಿ, ಡಾ. ಅರುಣಾ ಅಸ್ಕಿ, ಡಾ. ಆನಂದ ಗುಂಜಿಗಾವಿ, ಡಾ. ಪ್ರಕಾಶ ಕುಮಟಳ್ಳಿ, ಡಾ. ವಿಜಯ ಕುಮಾರ ಚೈನಿ, ಡಾ. ಜ್ಯೋತಿ ಕುಮಟಳ್ಳಿ, ಡಾ. ರವಿ ಪಾಂಗಿ, ಡಾ. ಮಹೇಶ ತೇರದಾಳ ಇನ್ನಿತರರು ಉಪಸ್ಥಿತರಿದ್ದರು.