ರಾಜಸ್ಥಾನ ಸಂಪುಟ ವಿಸ್ತರಣೆ:15 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ಜೈಪುರ, ನ.21-ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನಾರಚನೆ ಯಾಗಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರದ 15 ಮಂದಿ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ‌ ಕಲ್ರಾಜ್ ಮಿಶ್ರಾ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಹೇಮಾರಾಮ್ ಚೌಧರಿ, ಮಹೇಂದ್ರಜೀತ್ ಸಿಂಗ್ ಚೌಧರಿ, ರಾಮ್ ಲಾಲ್ ಜಾಟ್, ಮಹೇಶ್ ಜೋಶಿ, ಗೋವಿಂದ ರಾಮ್ ಮೇಘಾವಾಲ್, ಶಕುಂತಲಾ ರಾವತ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜಾಹಿದಾ, ಬ್ರಿಜೇಂದ್ರ ಸಿಂಗ್ ಓಲಾ, ರಾಜೇಂದ್ರ ಗುದಾ, ಮುರಾರಿ ಲಾಲ್ ಮೀನಾ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿನ್ನೆ ಸಂಪುಟ ಪುನಾರಚನೆ ಹಿನ್ನೆಲೆ ಅಶೋಕ್ ಗೆಹ್ಲೋಟ್ ತಮ್ಮ ಸರ್ಕಾರದ ಎಲ್ಲಾ ಸಚಿವರ ರಾಜೀನಾಮೆಯನ್ನು ಪಡೆದಿದ್ದರು. ಇಂದು 15 ಮಂದಿಯನ್ನು ಸಚಿವ ಸಂಪುಟಕ್ಕೆ ಸೇರ್ಪಡೆ‌ ಮಾಡಿಕೊಂಡಿದ್ದಾರೆ.
ರಾಜಸ್ಥಾನ ಸರ್ಕಾರ ರಚನೆಯಾದ ಬಳಿಕ ತಮ್ಮ ಬೆಂಬಲಿಗರನ್ನು ಗೆಹ್ಲೋಟ್ ಕಡೆಗಣಿಸುತ್ತಿದ್ದಾರೆ ಎಂದು ಸಚಿನ್ ಪೈಲಟ್ ಹೈಕಮಾಂಡ್‍ಗೆ ದೂರು ನೀಡಿದ್ದರು.
ಹೀಗಾಗಿ ಈ ಬಾರಿ ಪುನಾರಚನೆಯಲ್ಲಿ 5 ಮಂದಿ ಸಚಿನ್ ಪೈಲಟ್ ಬೆಂಬಲಿಗರಿಗೆ ಮಂತ್ರಿಸ್ಥಾನ ಕೊಡಲಾಗಿದೆ. 11 ಜನ ಕ್ಯಾಬಿನೆಟ್ ಸಚಿವರು ಸರ್ಕಾರದಲ್ಲಿ ಇದ್ದಾರೆ.
ಈ ಹಿಂದೆ ಸಚಿವರಾಗಿದ್ದವರ ಪೈಕಿ 3 ಜನ ಗೋವಿಂದ್ ಸಿಂಗ್ ದೋತಸ್ರಾ, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರನ್ನು ಕೈ ಬಿಟ್ಟು ಉಳಿದಂತೆ ಈ ಹಿಂದೆ ಇದ್ದ ಸಚಿವರಿಗೆ ಮತ್ತೆ ಮಂತ್ರಿ ಸ್ಥಾನ ಕೊಡಲಾಗಿದೆ.