ರಾಜಸ್ಥಾನದಲ್ಲಿ ಭೂಕಂಪನ

ಜೈಪುರ, ಜು.೨೧-ರಾಜಸ್ಥಾನದ ಜೈಪುರ ಸುತ್ತಮುತ್ತ ಇಂದು ಮುಂಜಾನೆ ಸರಣಿ ಭೂಕಂಪನ ಸಂಭವಿಸಿದ್ದು, ಜನರು ಆತಂಕಗೊಂಡು ಕಟ್ಟಡಗಳಿಂದ ಹೊರಗೋಡಿ ಬಂದಿದ್ದಾರೆ. ಆದರೆ ಯವುದೇ ಪ್ರಾಣಹಾನಿ ಸಂಭವಿಸಿರುವ ವರದಿಯಾಗಿಲ್ಲ.
ಕೇವಲ ಅರ್ಧ ಗಂಟೆ ಅವಧಿಯಲ್ಲಿ ಮೂರು ಬಾರಿ ಭೂಕಂಪದ ಅನುಭವ ಆಗಿದ್ದು, ಕೊನೆಯ ಭೂಕಂಪ ಮುಂಜಾನೆ ೪.೨೫ರ ಸುಮಾರಿಗೆ ಸಂಭವಿಸಿದೆ.
೧೦ ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ ೩.೪ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.
ಇದಕ್ಕೂ ಮುನ್ನ ಮುಂಜಾನೆ ೪.೨೨ರ ವೇಳೆಗೆ ೩.೧ ತೀವ್ರತೆಯ ಭೂಕಂಪ ೫ ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಅದಕ್ಕೂ ಮೊದಲು ೧೦ ಕಿಲೋಮೀಟರ್ ಆಳದಲ್ಲಿ ನಸುಕಿನ ವೇಳೆ ೪.೦೯ ಗಂಟೆಗೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ತೀವ್ರತೆ ೪.೪ರಷ್ಟಿತ್ತು ಎನ್ನಲಾಗಿದೆ.
ಸದ್ಯ ಅದೃಷ್ಟವಶಾತ್ ಯಾವುದೇ ಹಾನಿ ಅಥವಾ ಸಾವು ನೋವುಗಳ ಬಗ್ಗೆ ವರದಿಗಳು ಬಂದಿಲ್ಲ. ಈ ಭೂಕಂಪದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ, ಜೈಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭೂಕಂಪದ ಅನುಭವ ಆಗಿದೆ. ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಎಂಬ ನಂಬಿಕೆ ನನ್ನದು ಎಂದು ಟ್ವೀಟ್ ಮಾಡಿದ್ದಾರೆ.