ರಾಜಸ್ತಾನದಿಂದ ರಾಜ್ಯಸಭೆಗೆ ಸೋನಿಯಾ ಸ್ಪರ್ಧೆ:ನಾಮಪತ್ರ ಸಲ್ಲಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಫೆ.14:ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ರಾಜಸ್ತಾನ ವಿಧಾನಸಭೆಯಿಂದ ನಾಮನಿರ್ದೇಶನ ಬಯಸಿ ಇಂದು ನಾಮಪತ್ರ ಸಲ್ಲಿಸಿದರು. ನಾಳೆ ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿರುವ ಹಿನ್ನೆಲೆಯಲ್ಲಿ ಇಂದು ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಸೋನಿಯಾ ಅವರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಲೋಕಸಭಾ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.
ಉತ್ತರ ಪ್ರದೇಶದ ರಾಯ್‍ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಸೋನಿಯಾ, ಇದೇ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಲು ಮುಂದಾಗಿದ್ದಾರೆ.
ಇಂದು ವಸಂತ ಪಂಚಮಿಯ ಶುಭ ದಿನವಾದ ಇಂದು  ಜೈಪುರಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುವರಾಜ ರಾಹುಲ್‍ಗಾಂಧಿ, ಕಾಂಗ್ರೆಸ್ ಮುಖಂಡ ಕೆ.ಸಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಅಶೋಕ್‍ಗೆಲ್ಹೋಟ್,ಮಾಜಿ ಉಪಮುಖ್ಯಮಂತ್ರಿ ಸಚಿನ್‍ಪೈಲಟ್ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದರು.
ಈ ಮೊದಲು ಸೋನಿಯಾಗಾಂಧಿ ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ತೆಲಂಗಾಣ, ಮಧ್ಯಪ್ರದೇಶ, ಕರ್ನಾಟಕ ರಾಜ್ಯದಿಂದ ಸ್ಪರ್ಧಿಸುವಂತೆ ಸೋನಿಯಾ ಅವರಿಗೆ ಒತ್ತಡಗಳು ಬಂದಿದ್ದವು. ಈಗ ಅವರು ಅಂತಿಮವಾಗಿ ರಾಜಸ್ತಾನದಿಂದ ಸ್ಪರ್ಧಿಸುತ್ತಿದ್ದಾರೆ.