ರಾಜಶ್ರೀ ಸಿಮೆಂಟ್ಸ್‌ ಗಣಿ ಸೇರಿ ಅಲ್ಟ್ರಾಟೆಕ್‌ನ೧೦ ಗಣಿಗಳಿಗೆ ಫೈವ್‌ ಸ್ಟಾರ್‌ ರೇಟಿಂಗ್‌

ಕಲಬುರಗಿ, ಜು 14: ಕಲಬುರ್ಗಿಯ ರಾಜಶ್ರೀ ಸಿಮೆಂಟ್ ವರ್ಕ್ಸ್‌ನ ಅಧೀನದಲ್ಲಿರುವ ಸುಣ್ಣದಕಲ್ಲಿನ (ಲೈಮ್‌ಸ್ಟೋನ್‌) ಗಣಿ ಸೇರಿದಂತೆ ಸಿಮೆಂಟ್ ಮತ್ತು ರೆಡಿ-ಮಿಕ್ಸ್ ಉತ್ಪಾದಕ ಸಂಸ್ಥೆ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್‌ನ ಹತ್ತು ಸುಣ್ಣದಕಲ್ಲಿನ ಗಣಿಗಳಿಗೆ ಗಣಿಗಾರಿಕೆಗಳ ಸಚಿವಾಲಯ ಮತ್ತು ಗಣಿಗಳ ಬ್ಯೂರೋ ನೀಡುವ 2020- 21ನೇ ಸಾಲಿಗಾಗಿ ಫೈವ್‌ ಸ್ಟಾರ್‌ ರೇಟಿಂಗ್ ಸಿಕ್ಕಿದೆ.

ಕಳೆದ ಜುಲೈ 12ರಂದು ನವದೆಹಲಿಯಲ್ಲಿ ನಡೆದ ೬ನೆ ಗಣಿ ಮತ್ತು ಖನಿಜಗಳ ಶೃಂಗಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ತಮ ಮತ್ತು ದೀರ್ಘಕಾಲ ಬಾಳಿಕೆ ಬರುವ ಗಣಿಗಾರಿಕೆ ಪದ್ಧತಿ ಅಳವಡಿಸಿಕೊಂಡಿರುವ ಆಧಾರದಲ್ಲಿ ಗಣಿ ಸಚಿವಾಲಯ ಫೈವ್‌ ಸ್ಟಾರ್‌ ರೇಟಿಂಗ್ ನೀಡುತ್ತದೆ.

ಫೈವ್‌ ಸ್ಟಾರ್‌ ರೇಟಿಂಗ್‌ ಪ್ರಮಾಣಪತ್ರ ಹಾಗೂ ಟ್ರೋಫಿಗಳನ್ನು ಕಲ್ಲಿದ್ದಲು ಮತ್ತು ಗಣಿಗಾರಿಕೆಗಳ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಪ್ರಶಸ್ತಿ ವಿಜೇತ ಘಟಕಗಳ ಆಯಾ ಪ್ರತಿನಿಧಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ರೈಲ್ವೆ ಖಾತೆ ರಾಜ್ಯ ಸಚಿವ ರಾವ್‌ಸಾಹೇಬ್ ದನ್ವೆ ಇನ್ನಿತರರು ಉಪಸ್ಥಿತರಿದ್ದರು.

ರೇಟಿಂಗ್ ಪದ್ಧತಿಯಲ್ಲಿ ಅತ್ಯುನ್ನತ ರೇಟಿಂಗ್ ಆಗಿರುವ ಫೈವ್‌ ಸ್ಟಾರ್‌ ಪ್ರಮಾಣಪತ್ರವನ್ನು ವೈಜ್ಞಾನಿಕವಾದ, ಸಮರ್ಥ ಹಾಗೂ ದೀರ್ಘಕಾಲ ಇರುವಂತಹ ಗಣಿಗಾರಿಕೆ, ಅನುಮೋದಿತ ಉತ್ಪಾದನೆ, ಭೂಮಿ, ಪುನರ್ವಸತಿಹಾಗೂ ಇತರ ಸಾಮಾಜಿಕ ಪ್ರಭಾವಗಳು ಮುಂತಾದ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ನೀಡಲಾಗುತ್ತದೆ.