ರಾಜಭವನ ಮುತ್ತಿಗೆ ಯತ್ನ ವಾಟಾಳ್ ಸೇರಿ ಹಲವರ ಬಂಧನ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಬೆಳಿಗ್ಗೆ ರಾಜಭವನಕ್ಕೆ ಮುತ್ತಿಗೆ ಹಾಕಿದರು. ಕನ್ನಡ ಹೋರಾಟಗಾರರಾದ ಸಾ.ರಾ. ಗೋವಿಂದು, ಪ್ರವೀಣ್ ಕುಮಾರ್ ಶೆಟ್ಟಿ, ಕೆ.ಆರ್. ಕುಮಾರ್, ಎನ್. ಮೂರ್ತಿ, ಮತ್ತಿತರ ಮುಖಂಡರು ಭಾಗವಹಿಸಿದರು.

ಬೆಂಗಳೂರು, ಸೆ.೨೬- ಕಾವೇರಿ ನದಿ ನೀರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದೆಂದು ಒತ್ತಾಯಿಸಿ ರಾಜಭವನ ಮುತ್ತಿಗೆ ಚಳುವಳಿ ನಡೆಸಿದ ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ನಗರದಲ್ಲಿಂದು ವಿಧಾನಸೌಧ ಮುಂಭಾಗ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ರಾಜಭವನ ಮುತ್ತಿಗೆ ಚಳವಳಿ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ನಿಷೇಧಾಜ್ಞೆ ಜಾರಿ ಹಿನ್ನೆಲೆ ಪ್ರತಿಭಟನೆ ನಡೆಸಬಾರದೆಂದು ಹೋರಾಟಗಾರರನ್ನು ವಶಕ್ಕೆ ಪಡೆದರು.
ಹೋರಾಟಗಾರರಾದ ಸಾ.ರಾ.ಗೋವಿಂದು, ಪ್ರವೀಣ್ ಶೆಟ್ಟಿ, ಕುಮಾರ್ ಸೇರಿ ಇನ್ನಿತರ ಕನ್ನಡ ಪರ ಸಂಘಟನೆಗಳ ನಾಯಕರ ಜತೆಗೂಡಿ ವಾಟಾಳ್ ನಾಗರಾಜ್ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರೂ ಮಾರ್ಗ ಮಧ್ಯೆ ಅವರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು.
ಇದಕ್ಕೂ ಮೊಲದು ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಇಂದು ನಾವು ಬೆಂಗಳೂರು ಬಂದ್ ಹೋರಾಟಕ್ಕೆ ಬೆಂಬಲ ನೀಡಿಲ್ಲ. ಆದರೆ, ಸೆ.೨೯ರಂದು ದೊಡ್ಡ ಮಟ್ಟದಲ್ಲಿ ಕರ್ನಾಟಕ ಬಂದ್ ಮಾಡಲಾಗುವುದು. ಶಾಂತಿಯುತವಾಗಿ ಎಲ್ಲರೂ ಸ್ವಯಂಪ್ರೇರಿತ ಬಂದ್‌ಗೆ ಬೆಂಬಲ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಸೆಪ್ಟೆಂಬರ್ ೨೯ರಂದು ಕನ್ನಡ ಒಕ್ಕೂಟದ ಆಶ್ರಯದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಸಾಹಿತಿಗಳು, ವ್ಯಾಪಾರಿಗಳು ಎಲ್ಲರೂ ಇದಕ್ಕೆ ಬೆಂಬಲ ಕೊಡಬೇಕು ಎಂದ ಅವರು, ಪೊಲೀಸರು ಉದ್ದೇಶ ಪೂರಕವಾಗಿ ನಮ್ಮ ಹೋರಾಟ ತಡೆಯಲು ಮುಂದಾಗಬಾರದು. ನಾವು ಜನರೊಂದಿಗೆ ಸೇರಿ ಬಂದ್ ನಡೆಸುತ್ತೇವೆ ಎಂದರು.