ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ : ತಪ್ಪಿದ ಅನಾಹುತ

ಹೈದರಾಬಾದ್,ಜ.೪- ನವದೆಹಲಿ – ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ರಾಜಧಾನಿ ಎಕ್ಸ್‌ಪ್ರೆಸ್ ರೈಲು ನಿನ್ನೆ ರಾತ್ರಿ ೯ರ ವೇಳೆ ನವದೆಹಲಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದಾಗ ತೆಲಂಗಾಣದ ವಿಕರಾಬಾದ್ ಜಿಲ್ಲೆ ನವಾಂಡ್ಗಿ ರೈಲು ನಿಲ್ದಾಣದ ಸಮೀಪ ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಲೋಕೊ ಪೈಲೆಟ್ ರೈಲು ಎಂಜಿನ್‌ನಲ್ಲಿ ಬೆಂಕಿ ಉರಿಯುವುದನ್ನು ಗಮನಿಸಿದ ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ. ಕೂಡಲೇ ಬೋಗಿಗಳಿಂದ ಎಂಜಿನ್‌ನನ್ನು ಬೇರ್ಪಡಿಸಿದ್ದಾರೆ ಎಂದು ದಕ್ಷಿಣ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಎಂಜಿನ್ ಬದಲಾವಣೆ ಮಾಡಿಕೊಂಡು ರಾಜಧಾನಿ ಎಕ್ಸ್‌ಪ್ರೆಸ್ ರೈಲು ತಡವಾಗಿ ಸಂಚರಿಸಿತು. ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.