ರಾಜಧಾನಿಯಲ್ಲಿ ಸಾವು ದ್ವಿಗುಣ

ಬೆಂಗಳೂರು, ಮೇ ೨೦-ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯ ತೀವ್ರ ಕೊಂಚ ಮಟ್ಟಿಗೆ ತಗ್ಗುತ್ತೀರುವ ನಡುವೆ ಸಾವಿನ ಸಂಖ್ಯೆ ದ್ವಿಗುಣ ಆಗುತ್ತೀರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿದೆ.
ಕೊರೋನಾ ಆರಂಭದಿಂದ ಹದಿಮೂರು ತಿಂಗಳಲ್ಲಿ ೫ ಸಾವಿರ ಜನರು ಈ ಮಹಾಮಾರಿಯಿಂದ ಕೊನೆಯುಸಿರೆಳೆದರೆ, ಕೇವಲ ಒಂದು ತಿಂಗಳಿನಲ್ಲಿ ೪,೯೭೮ ಮಂದಿ ಬಲಿಯಾಗಿರುವುದು ಆತಂಕ ಹೆಚ್ಚಿಸಿದೆ.ಜತೆಗೆ, ೪೯ ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಮೃತಪಟ್ಟಿರುವುದು ಮತ್ತಷ್ಟು ಚಿಂತೆಗೀಡು ಮಾಡಿದೆ.
ಕಳೆದ ೩೦ ದಿನಗಳಲ್ಲಿ ಸಾವನ್ನಪ್ಪಿದವರಲ್ಲಿ ೧,೦೯೦ ಮಂದಿ ೪೯ ವರ್ಷಕ್ಕಿಂತ ಕಡಿಮೆ ವಯಸ್ಸಿನರಿದ್ದು, ಈ ಪ್ರಮಾಣ ಶೇ.೧೦೦ ಕ್ಕಿಂತ ಹೆಚ್ಚಾಗಿದೆ. ಅಲ್ಲದೆ, ಎರಡನೇ ಅಲೆಯೂ ಯುವಕರ ಮೇಲೆ ಪರಿಣಾಮ ಬೀರುತ್ತದೆಯೆ ಎಂದು ನಿರ್ಧರಿಸಲು ಗಂಭೀರ ಅಧ್ಯಯನಗಳನ್ನು ನಡೆಸಬೇಕು ಎಂದು ತಜ್ಞರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೋವಿಡ್ ತಜ್ಞರ ಸಮಿತಿ ಸದಸ್ಯ ಡಾ.ಅನೂಪ್ ಅಮರನಾಥ್, ಕೊರೋನಾ ಆರಂಭದ ಹಂತ ನೋಡಿದರೆ, ಹಿರಿಯ ನಾಗರಿಕರಲ್ಲಿ ಸಾವುನೋವುಗಳು ಹೆಚ್ಚುಗಿದ್ದವು. ಈಗ ಕಳೆದ ೩೦ ದಿನಗಳಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ, ಸಾವಿನ ಪ್ರಮಾಣವೂ ಹೆಚ್ಚಾಗುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದರು.
ಯುವಕರ ಸಾವಿಗೆ ಆರೋಗ್ಯ ಮೂಲಸೌಕರ್ಯಗಳ ವಿಳಂಬ ಪ್ರಸ್ತುತಿಯಂತಹ ವಿವಿಧ ಅಂಶಗಳು ಕಾರಣಗಳಾಗಿರಬಹುದು ಎಂದು ಹೇಳಿದರು.
ಡಾ.ಗಿರಿಧರ ಆರ್ ಬಾಬು ಮಾತನಾಡಿ, ವಯೋಮಾನದವರಲ್ಲಿ ಏಪ್ರಿಲ್ ನಿಂದ ಮೇ ವರೆಗೆ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಯುವ ವಯಸ್ಸಿನ ಹೆಚ್ಚಿನ ಜನರು ಸತ್ತಿದ್ದಾರೆ ಎಂದು ನಾವು ಹೇಳಲಾಗುವುದಿಲ್ಲ. ಆದರೆ, ಸೋಂಕಿಗೆ ತುತ್ತಾಗುವ ಅನೇಕರು ಪರೀಕ್ಷಿಸದೆ ಮನೆಯಲ್ಲಿಯೇ ಪ್ರತ್ಯೇಕಿಸಿಕೊಳ್ಳುತ್ತಾರೆ. ಇದು ಸಹ ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ಎಂದರು.