ರಾಜಧಾನಿಯಲ್ಲಿ ಭಾರೀ ಮಳೆ;ಜನಜೀವನ ಅಸ್ತವ್ಯಸ್ತ


ಬೆಂಗಳೂರು, ಜೂ.೫-ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಮಳೆಯಿಂದಾಗಿ ನಗರದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದು, ಜನಜೀವನ ಅಸ್ತವ್ಯಸ್ತವಾಯಿತು.
ಮಳೆಯಿಂದಾಗಿ ಚರಂಡಿ?ಹಾಗೂ ಮ್ಯಾನ್‌ಹೋಲ್‌ಗಳು ಕ್ಷಣ ಮಾತ್ರದಲ್ಲಿ ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು. ಅದೇ ರೀತಿ, ಕೆಲ ಭಾಗಗಳಲ್ಲಿ ರಾಜಕಾಲುವೆ, ಉದ್ಯಾನ, ಮೈದಾನಗಳು ಸಂಪೂರ್ಣ ಜಲಾವೃತಗೊಂಡು ಮಧ್ಯಾಹ್ನ ವರೆಗೂ ನೀರು ಹರಿಯುತ್ತಿದ್ದ ದೃಶ್ಯ ಕಂಡಿತು.
ಪ್ರಮುಖವಾಗಿ ಗಿರಿನಗರ ಮತ್ತು ದತ್ತಾತ್ರೇಯ ದೇವಸ್ಥಾನ ಪಕ್ಕ ತಗ್ಗು ಪ್ರದೇಶ ಹಾಗೂ ಸಾರಕ್ಕಿ ೬ನೇ ಹಂತ, ಶಾಕಂಬರಿ ನಗರ, ಡಿಜೆ ಹಳ್ಳಿಯ ರಾಜಕಾಲುವೆ ಅಕ್ಕಪಕ್ಕದ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜಲಾವೃತವಾಗಿದೆ.
ಚರಂಡಿ, ರಾಜಕಾಲುವೆಗಳಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನೀರಿನ ಹರಿವಿಗೆ ಅಡ್ಡಿಯಾಗಿ?ಅಕ್ಕಪಕ್ಕದ ಮನೆಗಳಿಗೆ ನುಗ್ಗಿದೆ. ಈ ಸಂಬಂಧ ಸ್ಥಳೀಯರು ಪಾಲಿಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದರೂ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸಲಿಲ್ಲ. ಬಿಬಿಎಂಪಿ ಸಿಬ್ಬಂದಿಯನ್ನು ಕಾದು ಹೈರಾಣಾದ ಸ್ಥಳೀಯರು ಸ್ವತಃ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದರು. ಮ್ಯಾನ್‌ಹೋಲ್‌ಗಳಲ್ಲಿ ಕಟ್ಟಿಕೊಂಡಿದ್ದ ಕಸ ಹೊರತೆಗೆದರು.
ಸಂಪರ್ಕ ಕಡಿತ: ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಮಳೆಗೆ ತಗ್ಗು ಪ್ರದೇಶದ ರಸ್ತೆಗಳ ಚಿತ್ರಣವೇ ಬದಲಾಯಿತು. ರಸ್ತೆ ಗುಂಡಿಗಳಲ್ಲಿ?ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾದವು.ಕೆಲ ರೈಲ್ವೆ ಕೆಳ ಸೇತುವೆಗಳು ಹಾಗೂ ತಗ್ಗು ಪ್ರದೇಶದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿದೆ.
ಮುರಿದು ಬಿತ್ತು ಮರ: ಇಲ್ಲಿನ ಜೆಪಿ ನಗರದ ಮೊದಲನೇ ಹಂತದ ಮರದ ೨ ದೊಡ್ಡ ಕೊಂಬೆಗಳು ನೆಲಕ್ಕುರುಳಿವೆ. ಪರಿಣಾಮ ನಿಲ್ಲಿಸಲಾಗಿದ್ದ ಎರಡು ಕಾರುಗಳಿಗೆ ಹಾನಿಯಾಗಿದೆ. ಇನ್ನು, ಜಯನಗರ ೫ನೇ ಬ್ಲಾಕ್?ನಲ್ಲಿ?? ಒಂದು ಕೊಂಬೆ , ಲಗ್ಗೆರೆ ರಿಂಗ್? ರಸ್ತೆಯ ೧೧ನೇ ಕ್ರಾಸ್?ನಲ್ಲಿ ಒಂದು ಮರದ ಕೊಂಬೆ ಮುರಿದುಬಿದ್ದಿದೆ.
ತಡರಾತ್ರಿ ಶ್ರೀನಿವಾಸನಗರ, ಚಾಮರಾಜಪೇಟೆ, ಆಶ್ರಮ, ಮೆಜೆಸ್ಟಿಕ್, ಕಾರ್ಪೊರೇಷನ್, ಕೆ.ಆರ್?.ಮಾರ್ಕೆಟ್?, ಶಾಂತಿನಗರ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಕೂಡ ಹೆಚ್ಚಿನ ಮಳೆಯಾಗುತ್ತಿದ್ದು, ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಎಡಬಿಡದಂತೆ ಮಳೆ ಸುರಿಯುತ್ತಿದೆ. ರಾಜಧಾನಿಯಲ್ಲಿಯೂ ಇನ್ನೆರಡು ದಿನ ಮಳೆ ಮುಂದುವರೆಯುವ ಮುನ್ಸೂಚನೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ.