ರಾಜಧಾನಿಯಲ್ಲಿ ಎರಡು ದಿನದೊಳಗೆ 1.67 ಲಕ್ಷ ವಾರಿಯರ್ಸ್‌ಗೆ ಲಸಿಕೆ

ಬೆಂಗಳೂರು, ಜ.6- ರಾಜಧಾನಿ ಬೆಂಗಳೂರಿನಲ್ಲಿ ಬರೀ ಎರಡು ದಿನದೊಳಗೆ ನಗರದ 1.67 ಲಕ್ಷ ಕೊರೋನಾ ವಾರಿಯರ್ಸ್‌ಗೆ ಕೋವಿಡ್ ಲಸಿಕೆ ಹಾಕಲಾಗುವುದು ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಆರೋಗ್ಯ ಅಧಿಕಾರಿ ವಿಜೇಂದ್ರ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸುಮಾರು 1,500ಕ್ಕೂ ಅಧಿಕ ಕೇಂದ್ರದಲ್ಲಿ ಕೋವಿಡ್ ಲಸಿಕೆ ಹಾಕವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಕೇಂದ್ರದಲ್ಲಿ 100 ಮಂದಿಗೆ ಲಸಿಕೆ ನೀಡಿದರೂ ಕೇವಲ ಎರಡು ದಿನದಲ್ಲಿ ನೋಂದಣಿ ಮಾಡಿಕೊಂಡ ಎಲ್ಲ 1.67 ಲಕ್ಷ ಮಂದಿಗೂ ನೀಡಬಹುದಾಗಿದೆ ಎಂದು ತಿಳಿಸಿದರು.

ಇನ್ನು ಗುರುವಾರ ಲಸಿಕೆ ಹಾಕುವ ಸ್ಥಳಗಳ ಸಂಖ್ಯೆ ಅಂತಿಮಗೊಳ್ಳಿಸಲಾಗುವುದು. ಈ ಹಿಂದೆ ಅಂಗನವಾಡಿ ಹಾಗೂ ಶಾಲೆ ಕೊಠಡಿಗಳನ್ನು ಲಸಿಕೆ ಹಾಕವುದಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಲಾಗಿತ್ತು.

ಆದರೆ, ಈಗಾಗಲೇ ಶಾಲೆಗಳು ಆರಂಭವಾಗಿವೆ. ಅಂಗನವಾಡಿ ಕೇಂದ್ರದಲ್ಲಿ ಲಸಿಕೆ ಹಾಕುವುದಕ್ಕೆ ಬೇಕಾದ ಮೂರು ಕೊಠಡಿ ವ್ಯವಸ್ಥೆ ಇಲ್ಲ. ಹೀಗಾಗಿ, ಅಂಗನವಾಡಿ ಮತ್ತು ಶಾಲಾ ಕೊಠಡಿ ಕೈಬಿಡಲಾಗಿದೆ ಎಂದು ವಿವರಿಸಿದರು.
ಕೋವಿಡ್ ಲಸಿಕೆ ಹಾಕುವ ಡ್ರೈರನ್ ವೇಳೆ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬಂದಿವೆ. ಅವುಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಪಾಲಿಕೆ ವ್ಯಾಪ್ತಿಯ ದಾಸಪ್ಪ ಆಸ್ಪತ್ರೆಯಲ್ಲಿ 8 ರಿಂದ 10 ಲಕ್ಷ ಕೋವಿಡ್ ಲಸಿಕೆ ಸಂಗ್ರಹಿಸುವುದಕ್ಕೆ ಬೇಕಾದ ವ್ಯವಸ್ಥೆ ಇದೆ. ನಂತರ ಅಲ್ಲಿಂದ ಉಳಿದ ಕಡೆಗೆ ಸರಬರಾಜು ಮಾಡಲಾಗುವುದು. ಅದಕ್ಕೆ ಬೇಕಾದ ಶೀತಲಸರಪಳಿ ವಾಹನಗಳು ಸಿದ್ಧವಾಗಿವೆ ಎಂದು ತಿಳಿಸಿದರು.