ರಾಜಣ್ಣ ವಿರುದ್ಧ ಪ್ರಿಯಾಂಕ್ ಪರೋಕ್ಷ ಕಿಡಿ

ಬೆಂಗಳೂರು, ಜ. ೨೭- ವಿಧಾನಸಭಾ ಚುನಾವಣೆ ಟಿಕೆಟ್ ಪಡೆಯುವಾಗ ಹೈಕಮಾಂಡ್ ಮುಖ್ಯವಾಗುತ್ತೆ. ಟಿಕೆಟ್ ಸಿಕ್ಕಿ ಶಾಸಕರಾದ ಮೇಲೆ ಹೈಕಮಾಂಡ್ ಇಲ್ಲ ಎಂದರೆ ಹೇಗೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಸಚಿವರು, ಶಾಸಕರು ಹೈಕಮಾಂಡ್‌ನ ಗುಲಾಮರ ಎಂಬ ಸಚಿವ ರಾಜಣ್ಣನವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅವೈಜ್ಞಾನಿಕವಾಗಿ ಕುಡಿಯುವ ನೀರಿನ ಅನುಷ್ಠಾನವನ್ನು ಕೈಬಿಡಬೇಕು ಎಂದು ಶಿವಮೊಗ್ಗ ರೈತರ ನಿಯೋಗ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ ಖರ್ಗೆ ಅವರು, ಯಾರೂ ಯಾರ ಗುಲಾಮರಲ್ಲ. ನಾವು ಯಾರ ಗುಲಾಮರಲ್ಲ. ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ನಡೆದುಕೊಳ್ಳಬೇಕು. ಪಕ್ಷದಿಂದ ನಾವು, ನಮ್ಮಿಂದ ಪಕ್ಷವಲ್ಲ. ನಮ್ಮಿಂದಲೇ ಪಕ್ಷ ಅಂದುಕೊಂಡರೆ ಅದು ಅವರ ಮೂರ್ಖತನ ಎಂದು ಪರೋಕ್ಷವಾಗಿ ರಾಜಣ್ಣನವರ ವಿರುದ್ಧ ಕಿಡಿಕಾರಿದರು.
ಟಿಕೆಟ್ ಸಿಗುವಾಗ ಹೈಕಮಾಂಡ್ ಬೇಕಾಗುತ್ತದೆ, ಆಮೇಲೆ ಹೈಕಮಾಂಡ್ ಇಲ್ಲ ಎನ್ನುವುದು ಸರಿಯಲ್ಲ ಎಂದು ಹೇಳಿದರು.
ಅಸಮಾಧಾನ ಇಲ್ಲ
ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ೬ ತಿಂಗಳ ಒಳಗೆ ನಿಗಮ ಮಂಡಳಿ ನೇಮಕಾತಿ ಮಾಡುತ್ತೇವೆ ಎಂದು ಹೇಳಿದ್ದೆವು. ಮಾಡಿದ್ದೇವೆ. ಈ ವಿಚಾರದಲ್ಲಿ ಅಸಮಾಧಾನ ಇದೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಶಾಸಕರಿಗೆ ಯಾವುದೇ ಅಸಮಾಧಾನ ಇಲ್ಲ ಎಂದರು.
ನಿಗಮ ಮಂಡಳಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆದಿದೆ. ಆದಷ್ಟು ಬೇಗ ಕಾರ್ಯಕರ್ತರಿಗೂ ಅಧಿಕಾರ ನೀಡುತ್ತೇವೆ ಎಂದು ಅವರು ಹೇಳಿದರು.
ಸಭೆ
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಜಲಜೀವನ ಮಿಷನ್ ಅವೈಜ್ಞಾನಿಕವಾಗಿ ಜಾರಿ ಮಾಡುತ್ತಿರುವ ಬಗ್ಗೆ ರೈತರ ನಿಯೋಗ ಇಂದು ತಮಗೆ ಮನವಿ ಮಾಡಿದೆ. ಈ ಬಗ್ಗೆ ಫೆಬ್ರವರಿ ಮೊದಲ ವಾರದಲ್ಲಿ ಸಭೆ ಕರೆದು ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
ರೈತರ ಮನವಿ
ಇದಕ್ಕೂ ಮೊದಲು ತೀರ್ಥಹಳ್ಳಿಯ ರೈತರು ಹಾಗೂ ಗ್ರಾಮಸ್ಥರನ್ನೊಳಗೊಂಡ ನಿಯೋಗವು ಸಚಿವ ಪ್ರಿಯಾಂಕ ಖರ್ಗೆಯವರನ್ನು ಭೇಟಿ ಮಾಡಿ ಜಲಜೀವನ್ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವುದನ್ನು ಸಚಿವರ ಗಮನಕ್ಕೆ ತಂದು ಜಲಜೀವನ್ ಮಿಷನ್ ಯೋಜನೆಗೆ ಭೀಮನಕಟ್ಟೆ ಬಳಿ ನೀರೆತ್ತಲು ಯೋಜನೆ ರೂಪಿಸಲಾಗಿದೆ. ಇದು ಅವೈಜ್ಞಾನಿಕವಾದ ಯೋಜನೆ. ಮಾನಿ ನದಿಯು ಬೇಸಿಗೆಯಲ್ಲಿ ಬತ್ತಿ ಹೋಗುತ್ತದೆ. ಇದರಿಂದ ನೀರೆತ್ತಿದರೆ ತೀರ್ಥಹಳ್ಳಿ ತಾಲ್ಲೂಕಿನ ೩೫ ಪಂಚಾಯ್ತಿಗಳಿಗೆ ನೀರು ಸಾಕಾಗುವುದಿಲ್ಲ. ಅದರ ಬದಲು ಆಯಾ ಪಂಚಾಯ್ತಿ, ಹಳ್ಳಿ ವ್ಯಾಪ್ತಿಯಲ್ಲೇ ನೀರು ಸಂಗ್ರಹಕ್ಕೆ ಜಲಮೂಲಗಳಿವೆ. ಈ ಜಲಮೂಲಗಳಿಂದಲೇ ನೀರೆತ್ತಿ. ಈಗಿನ ಅವೈಜ್ಞಾನಿಕವಾಗ ಡಿಪಿಆರ್ ಕೈಬಿಟ್ಟು, ಹೊಸ ಡಿಪಿಆರ್ ರೂಪಿಸಿ ಎಂದು ತೀರ್ಥಹಳ್ಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊರಬೈಲು ವೆಂಕಟೇಶ್ ನೇತೃತ್ವದ ರೈತರ ನಿಯೋಗ ಸಚಿವ ಖರ್ಗೆಯವರಿಗೆ ಮನವಿ ಮಾಡಿತು.