ವಿಜಯಪುರ:ಮಾ.25: ಸಾವಿತ್ರಿ ಬಾಯಿ ಫುಲೆ ರಾಜ ಮಾತಾ ಜೀಜಾಬಾಯಿ ಗಂಗೂಬಾಯಿ ಹಾನಗಲ್, ಲತಾ ಮಂಗೇಶಕರ, ಕಲ್ಪನಾ ಚೌಲಾ ರಾಜೇಶ್ವರಿ ಗಾಯಕವಾಡಿ, ಮದರ ಥೆರೆಸಾ ರಾಷ್ಟ್ರಪತಿ ದ್ರೌಪದಿ ಮುರ್ಮು ಮುಂತಾದ ಮಹಿಳೆ ಜಗತ್ತಿಗೆ ಮಾದರಿಯಾಗಿದ್ದಾರೆ.
ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 6 ನೇ ಗೋಷ್ಠಿ ಉದ್ಘಟಿಸಿದ ಚಿಂತಕಿ ಶ್ವೇತಾ ಮಹಾಂತೇಶ ದಾನ್ನಮ್ಮನವರ ಮಾತನಾಡಿ ಲೋಕಾಯುಕ್ತ ಎಸ್ ಪಿ ಮಹಿಳೆ ಸೈನಿಕ ಸ್ಕೂಲ್ ಪ್ರಾಚಾರ್ಯರು ಮಹಿಳೆಯರು ಕೆಲಸ ಮಾಡುತ್ತಿರುವದು ಹೆಮ್ಮೆಯ ವಿಷಯ. ಆದರೆ ರಾಜಕೀಯ ಸ್ಥಾನಮಾನಗಳಲ್ಲಿ ಮಹಿಳೆ ಅತ್ಯಲ್ಪ. ಮಹಿಳೆ ಸಮರ್ಥಳಾಗಿದ್ದರೂ ಸಮಾಜ ಸೂಕ್ತ ಸ್ಥಾನಮಾನ ನೀಡುವಲ್ಲಿ ಹಿಂಜರಿಯುತ್ತಿದೆ. ಮಹಿಳೆ ಮಹಿಳೆಯರನ್ನೇ ದೌರ್ಜನ್ಯ ಮಾಡುತ್ತಿರುವದು ದುಃಖಕರ ಸಂಗತಿ.
ಹೆಣ್ಣು ಸುರಕ್ಷಿತವಾಗಿರಲು ಇನ್ನೂ ಹೆಚ್ಚಿನ ಕಠಿಣ ಕಾನೂನು ಗಳ ಅವಶ್ಯಕತೆ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮರ್ಥನೀಯವಾಗಿ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಅತ್ಯವಶ್ಯಕ ಎಂದರು. ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯ ಗೋಷ್ಠಿಯಲ್ಲಿ ಮೀಸಲಾತಿ ಮತ್ತು ಮಹಿಳೆ ಕುರಿತು ಮಾತನಾಡುತ್ತ ರಾಜಕೀಯ ಮೀಸಲಾತಿ ಮಹಿಳೆಗೆ ನಿಲುಕದ ವಿಷಯವಾಗಿದೆ. ಬ್ರೂಣಹತ್ಯೆ , ಅತ್ಯಾಚಾರ, ವರದಕ್ಷಿಣೆಯಂತಹ ಪಿಡುಗು ಇನ್ನೂ ನಿಂತಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ದುಡಿಯಲು ಅರ್ಹಳಾಗಿದ್ದರೂ ಅವಕಾಶಗಳ ಕೊರತೆ ಎದ್ದು ಕಾಣುತ್ತದೆ. ಇಂದು ಮಹಿಳೆ ಸಮರ್ಥಳಾಗಿ ತನ್ನ ಹಣೆಬರಹ ಶಿಕ್ಷಣದ ಮೂಲಕ ಬರೆಕೊಂಡು ಸಾಧಕಿಯಾಗುತ್ತಿದ್ದಾಳೆ ಎಂದರು.
ಎರಡನೆಯ ಉಪನ್ಯಾಸಕರಾದ ಅಂಜುಮನ್ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ ಉಜ್ವಲ ಸರನಾಡಗೌಡ ಮಾತನಾಡಿ ಮೂಲಭೂತ ಕಾನೂನುಗಳು ಸಮರ್ಥನೀಯವಾಗಿದ್ದರೂ ಸಮಾಜ ಅವುಗಳನ್ನು ಅಳವಡಿಸಿ ಮಹಿಳಾ ಹಕ್ಕುಗಳನ್ನು ನೀಡುವಲ್ಲಿ ವಿಫಲವಾಗಿದೆ. ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಎಂಬತ್ತು ಕಾನೂನುಗಳನ್ನು ಮಹಿಳೆಯರ ಸುರಕ್ಷತೆಗಾಗಿ ಬರೆದಿದ್ದು ಸ್ಮರಣೀಯ. ಮಹಿಳೆಯರು ತಮಗಿರುವ ಕಾನೂನುಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ ಅವರು ಮಾತನಾಡಿ ಪುರುಷ ಪ್ರಧಾನ ಸಮಾಜ ಮಹಿಳೆಯರ ಹಕ್ಕುಗಳನ್ನು ಬಳಸಿಕೊಳ್ಳಲು ಸಹಕರಿಸಬೇಕು, ಇದರಿಂದ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಮಹಿಳೆಯರನ್ನು ಗೌರವಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವದು ಹೆಮ್ಮೆಯ ವಿಷಯ ಮಹಿಳೆಯಿಂದಲೇ ಸಮಾಜಕ್ಕೆ ಘನತೆ ಗೌರವವಿದೆ ಎಂದರು
ಕಾರ್ಯಕ್ರಮದ ಸಾನಿಧ್ಯವಹಿಸಿ ಇಂಗಳೇಶ್ವರ ವಿರಕ್ತಮಠದ ಡಾ ಚನ್ನಬಸವ ಸ್ವಾಮೀಜಿ, ವಿರಕ್ತಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಪ್ಸರಾಬೇಗಂ ಚಪ್ಪರಬಂದ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಚಂದ್ರಶೇಖರ್ ಪಾಟೀಲ, ಸಂಗೀತಾ ಮಠಪತಿ, ದಿಲಾವರ ಖಾಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ ಸಂಗಮೇಶ ಮೇತ್ರಿ, ಸವಿತಾ ದೇಶಮುಖ, ಮಲ್ಲಿಕಾರ್ಜುನ ಅವಟಿ, ಮುಂತಾದವರು ಉಪಸ್ಥಿತರಿದ್ದರು.