ರಾಜಕೀಯ – ಶೈಕ್ಷಣಿಕ, ಪರಿಸರ ಅಭಿವೃದ್ಧಿ ಹರಿಕಾರ – ಎನ್‌ಎಸ್‌ಬಿ

ನಗರಸಭೆ ಹಿರಿಯ ಸದಸ್ಯ ಜಯಣ್ಣರವರ ಹುಟ್ಟು ಹಬ್ಬ : ರಕ್ತದಾನ ಶಿಬಿರ
ರಾಯಚೂರು.ಸೆ.೨೦- ನಗರದ ಅಭಿವೃದ್ಧಿ, ಪರಿಸರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಮೀಸಲಿಟ್ಟು ಜನಪರ ಕೆಲಸ ಮಾಡುವಂತಹ ವ್ಯಕ್ತಿತ್ವವನ್ನು ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ ಅವರು ರೂಢಿಸಿಕೊಂಡಿದ್ದಾರೆಂದು ಮಾಜಿ ಶಾಸಕರು ಹಾಗೂ ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಅವರು ಹೇಳಿದರು.
ಅವರಿಂದು ಖಾಸಗಿ ಕಲ್ಯಾಣ ಮಂಟಪದಲ್ಲಿ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರ ಹಾಗೂ ಇತರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಪರಿಸರ ಮತ್ತು ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಅದೇ ರೀತಿಯಲ್ಲಿ ಮಾನವನಿಗೆ ಜೀವ ನೀಡುವ ಮತ್ತು ಸೃಷ್ಟಿ ಒದಗಿಸುವ ರಕ್ತದಾನ ಮತ್ತು ನೇತ್ರದಾನ ಅಷ್ಟೇ ಮಹತ್ವದ ಕಾರ್ಯಗಳಾಗಿವೆ. ಜಯಣ್ಣ ಅವರು ಈ ಕ್ಷೇತ್ರದಲ್ಲಿ ತಮ್ಮ ಸಾಮಾಜಿಕ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಅವರು ಯಾವುದೇ ರಾಜಕೀಯ ಸ್ಥಾನಮಾನಕ್ಕೆ ಹೆಚ್ಚಿನ ಆದ್ಯತೆ ನೀಡದೆ, ತಮಗೆ ಬಂದ ಅಧಿಕಾರ ಮತ್ತು ಅವಕಾಶ ವ್ಯಾಪ್ತಿಯಲ್ಲಿ ಜನಪರ ಸಮಾಜ ಕಾರ್ಯಗಳನ್ನು ನಿರ್ವಹಿಸಿಕೊಂಡು ಇಂದು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇಯಾದ ಸಂಪರ್ಕ ಹೊಂದಿದಂತಹ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾನು, ದಿ.ಆರ್.ಆಂಜಿನೇಯ್ಯ ಹಾಗೂ ಜಯಣ್ಣ ಅವರು ೧೯೮೦ ರ ದಶಕಗಳಿಂದ ಒಟ್ಟಾಗಿ ಕಾರ್ಯ ನಿರ್ವಹಿಸಿದ್ದೇವೆ. ನಾವು ಯಾವುದೇ ಚರ್ಚೆ ನಡೆಸಿದರೂ ಅದನ್ನು ಅಕ್ಷರಗಳಲ್ಲಿ ದಾಖಲಿಸಲು ಜಯಣ್ಣ ಅವರು ನಮಗೆ ನೆರವಾಗುತ್ತಿದ್ದರು.
ಶಿಕ್ಷಣ ಕ್ಷೇತ್ರದಲ್ಲೂ ಇವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ನಗರಸಭೆಯಲ್ಲಿ ಸುಧೀರ್ಘಕಾಲ ಆಯ್ಕೆಗೊಳ್ಳುವ ಮೂಲಕ ಹಿರಿಯ ಸದಸ್ಯರಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ವಾರ್ಡ್‌ನಿಂದ ಅವರು ಸ್ಪರ್ಧಿಸಿದರೂ, ಆ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿತ್ವ ಅವರದ್ದು. ಹಳೆ ವಾರ್ಡ್‌ಗಳಿಗೂ ಭೇಟಿ ನೀಡಿದರೂ, ಜಯಣ್ಣ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳಲ್ಲಿ ಉದ್ಯಾನವನ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಸ್ಮರಿಸುವಂತೆ ಕಾರ್ಯ ನಿರ್ವಹಿಸಿದ್ದಾರೆ.
ಜಯಣ್ಣ ಅವರು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳ್ಳದೆ, ಯಾರೇ ಸಹಾಯ ಕೋರಿ ಬಂದರೂ ಅವರಿಗೆ ನೆರವು ನೀಡುವಂತಹ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಇವರ ಸಮಾಜಮುಖಿ ಕೆಲಸಗಳಿಂದಾಗಿ ಅವರು ಎಲ್ಲರ ಮಧ್ಯೆ ಉತ್ತಮ ಸಂಬಂಧ ಹೊಂದಿದವರಾಗಿದ್ದಾರೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಶಾಂತಪ್ಪ ಅವರು, ಜಯಣ್ಣ ಅವರು ರಾಜಕೀಯವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಮತ್ತು ಸಮಾಜಮುಖಿ ವ್ಯಕ್ತಿಯಾಗಿದ್ದಾರೆಂದರು. ಜಯಣ್ಣ ಶಿಕ್ಷಣ, ಪರಿಸರ ಪ್ರೇಮಿಗಳೊಂದಿಗೆ ಕ್ರಿಯಾಶೀಲ ರಾಜಕಾರಣಿಗಳು ಎನ್ನುವುದು ಅಷ್ಟೇ ಮಹತ್ವದ ಅಂಶವಾಗಿದೆ. ಅತ್ಯಂತ ಸರಳ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರಾಗಿದ್ದಾರೆ.
ಹುಟ್ಟು ಹಬ್ಬದ ಸಂದರ್ಭದಲ್ಲಿ ಸನ್ಮಾನಿತಗೊಂಡ ಜಯಣ್ಣ ಅವರು ಮಾತನಾಡುತ್ತಾ, ನನ್ನದು ಹಾಗೂ ಎನ್.ಎಸ್.ಬೋಸರಾಜು ಅವರ ಸಂಬಂಧ ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಸಂಬಂಧದ ವಿಸ್ತೃತತೆ ಹೊಂದಿದೆ. ರಾಜಕೀಯ ಕ್ಷೇತ್ರದಲ್ಲಿ ರಾಜಕೀಯ ಭೀಷ್ಮರೆಂದೆ ಗುರುತಿಸಿಕೊಂಡ ಬೋಸರಾಜು ಅವರು ನನ್ನ ಹಿತ ಚಿಂತಕರು. ನಾನು ೧೯೭೫-೭೬ ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಾಗ ನನಗೆ ಆ ಪಕ್ಷದಲ್ಲಿ ದಿ.ಆರ್.ಆಂಜಿನೇಯ್ಯ ಅವರು ಪರಿಚಿತರಾಗಿದ್ದರು. ಅವರ ಜೊತೆ ನಾನು ನನ್ನ ರಾಜಕೀಯ ಜೀವನ ಆರಂಭಿಸಿದೆ. ಅವರಿಗೆ ಅನಾರೋಗ್ಯದ ಸಂದರ್ಭದಲ್ಲಿ ಅವರು ನನಗೆ ಮುಂದಿನ ರಾಜಕೀಯ ನಡೆಯ ಬಗ್ಗೆ ನೀಡಿದ ಸೂಚನೆ ನಾನು ಇಂದು ಈ ಮಟ್ಟದಲ್ಲಿ ಉಳಿಯಲು ಸಾಧ್ಯವಾಗಿದೆ.
ರಾಜಕೀಯವಾಗಿ ನಾನು ಬೆಳೆಯಲು ನನಗೆ ದಿ.ಆರ್.ಆಂಜಿನೇಯ್ಯ ಅವರು ನೀಡಿದ ಮುಖ್ಯ ಸಲಹೆ ಎಂದರೆ, ಬೋಸರಾಜು ಅವರೊಂದಿಗೆ ನೀನು ಗುರುತಿಸಿಕೊಳ್ಳುವಂತೆ ಹೇಳಿದ್ದರು. ಅವರ ಸಲಹೆ, ಸೂಚನೆಯಂತೆ ನಾನು ಅಂದಿನಿಂದ ಇಂದಿನವರೆಗೂ ಬೋಸರಾಜು ಅವರ ಜೊತೆ ಉಳಿದುಕೊಂಡಿದ್ದೇನೆ. ಮುಂದೆಯೂ ಅವರೊಂದಿಗೆ ಇರುತ್ತೇನೆ ಎಂದು ಹೇಳುವ ಮೂಲಕ ನನ್ನ ರಾಜಕೀಯ ಸಂದಿಗ್ಧ ಸಂದರ್ಭದಲ್ಲಿ ನಗರಸಭೆ ಕಾಂಗ್ರೆಸ್ ಟಿಕೆಟ್ ದೊರೆಯುವಂತೆ ಮಾಡುವ ಮೂಲಕ ನಾನು ರಾಜಕೀಯವಾಗಿ ಈ ಸ್ಥಾನದಲ್ಲಿ ಮುಂದುವರೆಯಲು ಬೋಸರಾಜು ಅವರು ನೇರವಾಗಿ ಕಾರಣರಾಗಿದ್ದಾರೆ.
ನಗರಸಭೆ ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ನನಗೆ ಬೋಸರಾಜು ಅವರು ಮಾಡಿದ ನೆರವಿನಿಂದ ನಾನು ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಈ ರೀತಿ ನಾನು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವುದರ ಹಿಂದೆ ನಮ್ಮ ನಾಯಕರ ಬೆಂಬಲ ಮುಖ್ಯವಾಗಿದೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.