ರಾಜಕೀಯ ವಿರೋಧಿಗಳಿಗೆ ತಾಲ್ಲೂಕಿನ ಜನತೆ ಪಾಠ ಕಲಿಸಿ: ಸಚಿವ ಕೆಸಿಎನ್

ಕೆ.ಆರ್.ಪೇಟೆ: ಮಾ.18:- ನಾನು ರಾಜಕಾರಣದಲ್ಲಿ ಮುಂದುವರೆಯಬೇಕೆಂದರೆ ಕೈಮೇಲೆತ್ತಿ ಬೆಂಬಲ ಸೂಚಿಸಿ, ಇಲ್ಲದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲುವುದು ಬೇಡವೆಂದು ಹೇಳಿ, ನಿರ್ಧಾರ ನಿಮ್ಮದು, ಸ್ಪರ್ಧೆ ಮಾಡುವುದು ಬೇಡವೆಂದರೆ ಒಬ್ಬ ಸಾಮಾನ್ಯ ಸೇವಕನಂತೆ ಕ್ಷೇತ್ರದ ಜನತೆಯ ಸೇವೆ ಮಾಡಿಕೊಂಡು ಕಾಲ ಕಳೆಯುತ್ತೇನೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ತಾಲ್ಲೂಕಿನ ಕಿಕ್ಕೇರಿ ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಸಚಿವ ಡಾ.ನಾರಾಯಣಗೌಡರ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿ ತಮ್ಮ ಮಾತಿನ ಮಧ್ಯದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒಪ್ಪಿಗೆ ಪಡೆದ ಘಟನೆಯು ನಡೆಯಿತು.ಮೂರು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ತಾಲ್ಲೂಕಿನ ಅಭಿವೃದ್ಧಿಗಾಗಿ ದುಡಿಯುತ್ತಿರುವ ಸಚಿವ ನಾರಾಯಣಗೌಡರು ಕೈಗೊಳ್ಳುವ ರಾಜಕೀಯ ನಿರ್ಧಾರಗಳನ್ನು ಬೆಂಬಲಿಸಿ ಕೈ ಬಲಪಡಿಸಲು ನಾವು ದುಡಿಯುವ ಜೊತೆಗೆ ನಿಮ್ಮ ಜೊತೆ ಇದ್ದು ತಾಲ್ಲೂಕಿನಾಧ್ಯಂತ ಸಂಘಟನೆ ಮಾಡಿ ನಿಮ್ಮ ಗೆಲುವಿಗಾಗಿ ದುಡಿಯಲು ಬದ್ಧರಿದ್ದೇವೆ ಎಂದು ಕೈ ಮೇಲೆತ್ತಿ ಘೋಷಿಸಿದರು.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ನಾನು 1800 ಕೋಟಿ ರೂಪಾಯಿಗಳಿಗೂ ಹೆಚ್ವು ಅನುದಾನವನ್ನು ಬಿಡುಗಡೆ ಮಾಡಿಸಿ ತಂದು ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಗೆ ದುಡಿಯುತ್ತಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಸಚಿವರ ಕೊಡುಗೆಯು ಶೂನ್ಯ ಎಂದು ವದಂತಿಗಳನ್ನು ಹಬ್ಬಿಸುತ್ತಿರುವ ನನ್ನ ರಾಜಕೀಯ ವಿರೋಧಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹ ಅಭಿವೃದ್ಧಿ ವಿರೋಧಿಗಳಿಗೆ ತಾಲ್ಲೂಕಿನ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಸಚಿವ ನಾರಾಯಣಗೌಡ ಕೈಮುಗಿದು ಮನವಿ ಮಾಡಿದರು.
ನಾನು ಹಣ ಆಸ್ತಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ತಂದೆ-ತಾಯಿಗಳನ್ನು ಕಳೆದುಕೊಂಡಿರುವ ನಾನು ಕ್ಷೇತ್ರದ ಜನತೆಯಲ್ಲಿ ನನ್ನ ತಂದೆ ತಾಯಿಯನ್ನು ಕಾಣುತ್ತಿದ್ದೇನೆ. ತಾಲೂಕಿನ ಕೈಗೋನಹಳ್ಳಿ ಗ್ರಾಮದ ಒಬ್ಬ ಸಾಮಾನ್ಯ ರೈತನ ಮಗನನ್ನು ಮೂರು ಅವಧಿಗೆ ಶಾಸಕನನ್ನಾಗಿ ಆಯ್ಕೆ ಮಾಡಿ ನನ್ನ ಜೀವನದಲ್ಲಿಯೇ ಮರೆಯಲಾಗದ ಕಾಣಿಕೆ ನೀಡಿದ್ದೀರಿ ಎಂದರು.
ಕಾರ್ಯಕ್ರಮದಲ್ಲಿ ಛೇರ್ಮನ್ ಪ್ರಭಾಕರ್ ಅಭಿಮಾನಿಗಳ ಬಳಗದ ಅಧ್ಯಕ್ಷ ಕೆ.ಎಸ್.ಪ್ರಭಾಕರ್, ವಿಶ್ರಾಂತ ಹೋಂಗಾರ್ಡ್ ಅಧಿಕಾರಿ ಚಂದ್ರಶೇಖರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್,ತಾಲೂಕು ಪಂಚಾಯತಿ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ಮುಖಂಡರಾದ ಸರ್ವೇ ಪುಟ್ಟೇಗೌಡ, ಕೆ.ಜಿ.ತಮ್ಮಣ್ಣ, ಕಿಕ್ಕೇರಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಅರುಣಕುಮಾರ್, ಮನ್‍ಮುಲ್ ಮಾಜಿಅಧ್ಯಕ್ಷ ಗೂಡೆಹೊಸಳ್ಳಿಚನ್ನಿಂಗೇಗೌಡ, ಕಬ್ಬಾಳು ಈರಪ್ಪ, ಕಿಕ್ಕೇರಿನಾಗಣ್ಣ, ಶೆಟ್ಟಹಳ್ಳಿ ಕೃಷ್ಣೇಗೌಡ, ಗೋವಿಂದೇಗೌಡನಕೊಪ್ಪಲು ಪ್ರಕಾಶ್ ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.