ರಾಜಕೀಯ ವಿಡಂಬಣೆ ದರ್ಬಾರ್

ಹಿರಿಯ ನಿರ್ದೇಶಕ ವಿ.ಮನೋಹರ್ ಮತ್ತು ಯುವ ನಾಯಕ ಸತೀಶ್ ಕಾಂಬಿನೇಷನ್‍ನ ಹೊಸ ಚಿತ್ರ “ದರ್ಬಾರ್”. ರಾಜಕೀಯ ವಿಡಂಬಣೆ ಮತ್ತು ಮತದಾನದ ಮಹತ್ವ ಸಾರುವ ಚಿತ್ರವನ್ನು ಜನರ ಮುಂದೆ ಇಡಲು ಈ ಜೋಡಿ ಮುಂದಾಗಿದೆ.

ಹಳ್ಳಿಯ ರಾಜಕೀಯ, ಅಲ್ಲಿನ ವ್ಯವಸ್ಥೆ,ಜಾತಿ,ಹಣಬಲ ಸೇರಿದಂತೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು  ಉತ್ತಮ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ ಎನ್ನುವ ಸಾಮಾಜಿಕ ಕಳಕಳಿ ಮತ್ತು ಸಂದೇಶ ಜೊತೆಗೆ ನವಿರಾದ ಹಾಸ್ಯದ ಮೂಲಕ ಚಿತ್ರವನ್ನು ತೆರೆಗೆ ತರಲು ತಂಡ ಮುಂದಾಗಿದೆ.

ನಾಯಕ ಸತೀಶ್ ಅವರೇ ಬರೆದಿರುವ “ಬಂದೇ ಬುಡ್ತು ಊರಬ್ದಗೆ ನಡೆಯೂ ಎಲೆಕ್ಷನ್” ಸಾಹಿತ್ಯವಿರುವ ಗೀತೆಯನ್ನು ಉಪೇಂದ್ರ ಅವರು ಹಾಡಿದ್ದು  ಪಕ್ಕಾ ರಾ ಶೈಲಿಯಲ್ಲಿ ಹಾಡು ಮೂಡಿ ಬಂದಿದೆ.ಜೊತೆಗೆ ಸದ್ಯದ ಪರಿಸ್ಥಿತಿಯನ್ನು ಹಾಡಿನ ಮೂಲಕ ಕಟ್ಟಿಕೊಡಲಾಗಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಟ, ಸತೀಶ್ , ಇಡೀ ಕುಟುಂಬ ನೋಡಬಹುದಾದ ಚಿತ್ರ ದರ್ಬಾರ್, ಸನ್ನಿವೇಶ ಆಧಾರಿತ ಕಾಮಿಡಿ, ಸಾದಂಭರ್ಬಿಕ ಹಾಸ್ಯವನ್ನು ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ. ಚುನಾವಣೆಯಲ್ಲಿ ಜಾತಿ, ಹಣ ಹೆಂಡ ನೋಡಿ ಅಯೋಗ್ಯರಿಗೆ ಮತ ಹಾಕಬೇಡಿ,ಮತ ಹಾಕಿದರೆ ಏನೆಲ್ಲಾ ಆಗಲಿದೆ ಎನ್ನುವುದನ್ನು ಕಟ್ಟಿಕೊಡಲಾಗಿದೆ. ಸದ್ಯದ ಪರಿಸ್ಥಿತಿಗೆ ಸೂಕ್ತವಾಗಿದೆ ಎಂದರು.

ದಿಲ್ದಾರ್, ಮುನಿಯಾ, ಜಟಾಯು, ಆರಂಭ ಸೇರಿದಂತೆ ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಇದು ನಾಯಕನಾಗಿ ಮೊದಲ ಚಿತ್ರ. ಚಿತ್ರಕ್ಕೆ ಶಿಲ್ಪಾ ಬಿ.ಎನ್ ಬಂಡವಾಳ ಹಾಕಿದ್ದಾರೆ. 88 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು ಚಿತ್ರಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಂಡಿದ್ದೆ. ಜೊತೆಗೆ ಕಲಾವಿದರ ವರ್ಕ್ ಶಾಪ್ ಕೂಡ ನಡೆದಿದ್ದರಿಂದ ಚಿತ್ರೀಕರಣ ಸೆಟ್‍ನಲ್ಲಿ ಅನುಕೂಲವಾಯಿತು ಎನ್ನುವ ಮಾಹಿತಿ ಹಂಚಿಕೊಂಡರು.

ಚಿತ್ರದ ಕ್ಲೈಮ್ಯಾಕ್ಸ್ ಫೈಟ್‍ನ್ನು 7 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಪ್ರತಿದಿನ ಪೈಟರ್ಸ್ ಸೇರಿದಂತೆ ಸುಮಾರು 200 ಮಂದಿ ಭಾಗವಹಿಸಿದ್ದರು.ಒಳ್ಳೆಯ ಕಥೆಯನ್ನು ಮುಂದಿಟ್ಟುಕೊಂಡು ಚಿತ್ರ ಮಾಡಿದ್ದೇವೆ. ಚಿತ್ರ ಸೆನ್ಸಾರ್‍ಗೆ ಹೋಗಿದ್ದು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಪ್ರಕಟಿಸುತ್ತೇವೆ. ಚಿತ್ರದಲ್ಲಿ ಮೂರು ಹಾಡು, ಮೂರು ಫೈಟ್‍ಗಳಿವೆ ಎಂದರು.

ವಿ.ಮನೋಹರ್ ಅವರಲ್ಲಿನ ಕಾಮಿಡಿ ಪ್ರಜ್ಞೆ ಮತ್ತು ಮೊದಲಿನಿಂದಲೂ ಅವರೊಂದಿಗೆ ಚಿತ್ರ ಮಾಡಬೇಕೆನ್ನುವ ತುಡಿತದಿಂದ ಚಿತ್ರ ಮಾಡಿದ್ದೇವೆ. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.