ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ನೀರು

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.06:- ರಾಜ್ಯ ಸರ್ಕಾರ ಸಂಸತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆರೋಪಿಸಿದರು.
ತಾಲೂಕಿನ ಬನ್ನೂರು ಪಟ್ಟಣದ ಮೈಸೂರು -ಮಳವಳ್ಳಿ ಮುಖ್ಯ ರಸ್ತೆಯಲ್ಲಿ ರಾಜ್ಯ ರೈತ ಸಂಘಗಳ ಒಕ್ಕೂಟ ಮತ್ತು ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಡೆದ ರಸ್ತೆತಡೆ ವೇಳೆ ಅವರು ಮಾತನಾಡಿದರು.ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ನೀರು ಬಿಡುತ್ತಿದ್ದು,ರಾಜ್ಯದ ರೈತ ಮತ್ತು ಜನರ ಹಿತಾಸಕ್ತಿಯನ್ನು ಮಣ್ಣುಪಾಲು ಮಾಡಿ ಬರಗಾಲದಲ್ಲೂ ತಮಿಳುನಾಡಿನ ಮೂರನೇ ಬೆಳೆಗೆ ನೀರು ಹರಿಸುತ್ತಿದೆ.ಇದು ನಮ್ಮ ರಾಜ್ಯದ ರೈತರ ಪಾಲಿನ ಕರಾಳದಿನ.ರಾಜ್ಯದಲ್ಲಿ ಮಳೆ ಕೊರತೆ ಮುಂದುವರೆದಲ್ಲಿ ಮೈಸೂರು,ಮಂಡ್ಯ, ಹಾಸನ,ಚಾಮರಾಜನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ತಾತ್ವರ ಉಂಟಾಗಲಿದೆ.ಅಲ್ಲದೆ ಈ ಭಾಗದ ರೈತರ ಬೇಸಾಯಕ್ಕೂ ನೀರಿಲ್ಲ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವ ಅನಿವಾರ್ಯತೆ ಇಲ್ಲ.ಕಾವೇರಿ ನ್ಯಾಯಾಧಿಕರಣ ಮುಂದೆ ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಶೇಖರಣೆಯ ಅಂಕಿ -ಅಂಶವನ್ನು ಆಯೋಗದ ಮುಂದಿಟ್ಟು ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಬಹುದಿತ್ತು.ಆದರೆ, ಇದಾವುದನ್ನು ಮಾಡದೆ ತಮಿಳುನಾಡಿಗೆ ಏಕಾಏಕಿ ನೀರು ಹರಿಸುವ ಮೂಲಕ ಕರ್ನಾಟಕ ಸರ್ಕಾರ ತಮಿಳುನಾಡಿಗೆ ಗುಲಾಮಗಿರಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸಿ ಆಣೆಕಟ್ಟು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿತ್ತು.ಆದರೆ,ಅಧಿಕಾರ ಸಿಕ್ಕ ಮೇಲೂ ಬಜೆಟ್ ನಲ್ಲಿ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪ ಮಾಡಿಲ್ಲ.ರಾಜಕೀಯ ಪಕ್ಷಗಳು ಸುಳ್ಳು ಹೇಳಿ ರೈತರನ್ನು ವಂಚಿಸುವ ನಟನೆಯನ್ನು ಕರಗತ ಮಾಡಿಕೊಂಡಿವೆ.ಹಾಗಾಗಿ ರೈತರು ಜಾಗ್ರತೆಯಿಂದ ಇರಬೇಕು ಎಂದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು.ಕೃಷ್ಣರಾಜ ಸಾಗರ-ಕಬಿನಿ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ರೈತರ ಬೇಸಾಯಕ್ಕೆ ನೀರು ಹರಿಸಬೇಕು.ಈ ಭಾಗದ ಕೆರೆ-ಕಟ್ಟೆಗಳನ್ನು ತುಂಬಿಸಿ ಜಾನುವಾರುಗಳ ಜೀವ ಉಳಿಸಬೇಕು ಎಂದರು.
ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಸಂಸದರು ನಮ್ಮ ರಾಜ್ಯದ ರೈತರ ಪರ ಧ್ವನಿ ಎತ್ತಬೇಕು. ವಾಸ್ತವ ಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಬೇಕು.ಇಲ್ಲವಾದ ಲ್ಲಿ 28 ಸಂಸದರು ರಾಜ್ಯದ ರೈತರು ದೈನೇಸಿ ಸ್ಥಿತಿಯಲ್ಲಿದ್ದರೂ ರೈತರ ಬಗ್ಗೆ ಚರ್ಚಿಸದ ಸಂಸದರು ಅಪ್ರಯೋಜಕರು ಎಂದು ಟೀಕಿಸಿದರು.
ಇದೇ ವೇಳೆ ರೈತರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ. ಕೆ.ಶಿವಕುಮಾರ್ ಭಾವಚಿತ್ರಗಳನ್ನು ಸುಟ್ಟುಹಾಕಿದರು. ಸಾರ್ವತ್ರಿಕ ರೈತರನ್ನು ಕ್ಷಮೆ ಕೇಳುವಂತೆ ಒತ್ತಾಯಿಸಿದರು.ಕತ್ತೆಗಳಿಗೆ ಎಂ.ಎಲ್.ಎ ಮತ್ತು ಸಂಸದರ ಹುದ್ದೆಯ ಫಲಕಗಳನ್ನು ತೂಗುಹಾಕಿ ರಾಜ್ಯದಿಂ ಆಯ್ಕೆಯಾದ 28 ಸಂಸದರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿ ಕರ್ನಾಟಕದ ಜನತೆಗೆ ನೀರು ಇಲ್ಲದ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವುದು ರೈತರಿಗೆ ವಿಷಪ್ರಾಶನ ಮಾಡಿಸದಂತೆ ಎಂದು ಧಿಕ್ಕಾರ ಕೂಗಿದರು.ತಹಶೀಲ್ದಾರ್ ಟಿ.ಪಿ.ಸುರೇಶ್ ಆಚಾರ್ ಗೆ ಮನವಿ ಪತ್ರ ಸಲ್ಲಿಸಿದರು.
ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಕುರುಬೂರು ಪ್ರದೀಪ್, ಪಟೇಲ್ ಶಿವಮೂರ್ತಿ, ಪರಶಿವಮೂರ್ತಿ, ಹೆಗ್ಗೂರು ರಂಗರಾಜು,ಅತ್ತಹಳ್ಳಿ ಅರುಣ್ ಕುಮಾರ್, ಸಿ. ಲಿಂಗಣ್ಣ, ರಾಮ, ಚೇತನ, ಮಹೇಶ್, ಜಯರಾಮು, ಮಂಜು, ಶ್ರೀಧರ್, ಮಧು, ಶಿವಮೂರ್ತಿ, ರಾಜು, ಪಾಳ್ಯ ಸಿದ್ದಯ್ಯ, ಸುನಿಲ್, ಕುಮಾರ್ ಇತರರು ಹಾಜರಿದ್ದರು