ರಾಜಕೀಯ ಬಿಟ್ಟು ಶೈಕ್ಷಣಿಕ ಅಭಿವೃದ್ಧಿ ಮಾಡೋಣ ಬನ್ನಿ : ಶಿವಾನಂದ ಪಾಟೀಲ

ಕಲಬುರಗಿ:ಮಾ.25:ಪ್ರಜ್ಞಾ ದಿ ಇನ್ಸ್‍ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್, ಸ್ನೇಹಲೋಕ ಗೆಳೆಯರ ಬಳಗ ಮರತೂರ ಹಾಗೂ ಸರಕಾರಿ ಪ್ರೌಢ ಶಾಲೆ ಮರತೂರ ವತಿಯಿಂದ ಹತ್ತನೇಯ ತರಗತಿಯ ಮಕ್ಕಳಿಗೆ “ಹತ್ತರ ಭಯ ಹತ್ತಿರ ಬೇಡ ಎನ್ನುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಜಿಲ್ಲಾ ಪಂಚಾಯತ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ ನಮ್ಮೂರಿನ ಶಾಲೆ, ಶಿಕ್ಷಣ ಅಭಿವೃದ್ಧಿಯಾಗಬೇಕು, ಉತ್ತಮವಾದ ಗುಣಮಟ್ಟದ ಶಿಕ್ಷಣ ಕೊಡಬೇಕು. ಫಲಿತಾಂಶ ಸುಧಾರಣೆಯಾಗಬೇಕು. ವಿಶ್ವನಾಥ ಮರತೂರ ಅವರ ನೃತೃತ್ವದಲ್ಲಿ ಈ ಕಾರ್ಯಾಗಾರ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಮಕ್ಕಳೆಲ್ಲರೂ ಇದರ ಲಾಭ ಪಡೆಯಲಿ, ನಾವು ನಮ್ಮೂರಿನ ಶಾಲೆಗಾಗಿ ಕೆಲಸ ಮಾಡಲು ಸದಾ ಸಿದ್ಧರಾಗಿದ್ದೇವೆ ಎಂದರು. ಶೈಕ್ಷಣಿಕ ಗುಣಮಟ್ಟದ ಕೆಲಸ ಮಾಡಲು ರಾಜಕೀಯ ಬಿಟ್ಟು ಹೊರಬನ್ನಿ ಊರಿನ ಸಾರ್ವಜನಿಕರೆಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಬೇಕು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ನಮ್ಮೂರಿನ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತು, ಎಲ್ಲರಿಗೂ ಉತ್ತಮವಾದ ಕಲಿಯುವ ವಾತಾವರಣ ನಿರ್ಮಾಣವಾಗಬೇಕು ಶೈಕ್ಷಣಿಕ ಅಭಿವೃದ್ಧಿಗಾಗಿ ದುಡಿಯಲು ನಾವು ಸದಾ ಸಿದ್ಧರಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ, ನಾನು ರಾಜ್ಯದ ಅನೇಕ ಜಿಲ್ಲೆಗಳು, ಸರಕಾರಿ ಶಾಲೆಗಳು, ಸಮುದಾಯ ಮತ್ತು ಮಕ್ಕಳೊಂದಿಗೆ ಕಳೆದ ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಶಾಲೆಗಾಗಿ ನಾನೇನಾದರು ಮಾಡಬೇಕು ಎನ್ನುವ ಹಂಬಲದಿಂದ ನನ್ನ ಸ್ನೇಹಲೋಕ ಗೆಳೆಯರ ಬಳಗ ಹಾಗೂ ಪ್ರಜ್ಞಾ ಸಂಸ್ಥೆಯ ಮೂಲಕ ಕಳೆದ ವರ್ಷದಿಂದ ಶಾಲಾಭಿವೃದ್ಧಿ ಕೆಲಸವನ್ನು ಮಾಡಲು ಪ್ರಾರಂಭ ಮಾಡಿದ್ದೇನೆ. ಕಳೆದ ವರ್ಷ ಹತ್ತನೇಯ ತರಗತಿಯ ಮಕ್ಕಳಿಗಾಗಿ 5000ಕ್ಕೂ ಹೆಚ್ಚು ಬೆಲೆಬಾಳುವ ವಿಷಯಗಳ ಅಭ್ಯಾಸ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದ್ದೇನೆ. ಮಕ್ಕಳಿಗೆ ವಿಶೇಷವಾದ ಕಾರ್ಯಾಗಾರ ಮಾಡಿದ್ದೇನೆ ಅದರಂತೆ ಈ ವರ್ಷವೂ ಮುಂದುವರೆಸಿದ್ದೇನೆ. ಹತ್ತನೇಯ ತರಗತಿಯ ಫಲಿತಾಂಶ ಸುಧಾರಣೆಗಾಗಿ ಅಭ್ಯಾಸ ಪುಸ್ತಕಗಳು, ಸರಣಿ ಮಾದರಿ ಪರೀಕ್ಷಾ, ವಿಜ್ಞಾನ ಚಿತ್ರ ಸಂತೆ, ಹತ್ತರ ಭಯ ಹತ್ತಿರ ಬೇಡ ಕಾರ್ಯಾಗಾರ, ವಿಜ್ಞಾನ ರಂಗೋಲಿ ಸ್ಪರ್ಧೆ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸುವೆ. ಈ ಕಾರ್ಯದಲ್ಲಿ ಯಾವುದೇ ಅಡೆತಡೆಗಳು ಬಂದರು ನಿಲ್ಲದೇ ಮುನ್ನುಗ್ಗುತ್ತೇನೆ ಎಂದರು.

ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅಪರ ಆಯುಕ್ತಾಲಯದ ಉಪನಿರ್ದೇಶಕರು ಯೋಜನೆ ಸಕ್ರೆಪ್ಪಗೌಡ ಬಿರಾದಾರ, ಮರತೂರ ಶಾಲೆಯ ಕಟ್ಟಡ ನೋಡಿ ಬಹಳ ಸಂತೋಷವಾಗಿದೆ, ಸರಕಾರಿಂದ ಸಿಗಬೇಕಾದ ಭೌತಿಕ ಸೌಲಭ್ಯ ಎಲ್ಲವೂ ದೊರೆತಿದೆ ಇದೀಗ ಶಾಲೆಗೊಂದು ಸುಂದರವಾದ ಗಾರ್ಡನ್ ನಿರ್ಮಿಸಿ, ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಿ, ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿ, ಶಾಲೆಯ ಫಲಿತಾಂಶ ಹೆಚ್ಚಳ ಮಾಡಲು ಪಾಲಕರ ಸಹಕಾರ ಅತ್ಯವ್ಯಶ್ಯಕವಾಗಿದೆ ಎಲ್ಲಾ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿದರೆ ಫಲಿತಾಂಶದಲ್ಲಿ ಬದಲಾವಣೆ ತರಲು ಸಾಧ್ಯವಾಗಿದೆ ಎಂದರು.

ಇನ್ನೋರ್ವ ಅಥಿತಿ ಉಪನಿರ್ದೇಶಕರು (ಅಭಿವೃದ್ಧಿ) ಶಾಂತಗೌಡ ಪಾಟೀಲ ಮಾತನಾಡುತ್ತಾ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ಹೆಚ್ಚಾಗಿದ್ದು, ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವ ಮೂಲಕ ಈ ಬಾರಿಯ ಫಲಿತಾಂಶ ಹೆಚ್ಚಳ ಮಾಡಬೇಕು. ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಗಳು ಅಭಿವೃದ್ಧಿಯಾದರೆ ಶಾಶ್ವತವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖಂಡರಾದ ಅಜೀತಕುಮಾರ ಪೋಲಿಸ್ ಪಾಟೀಲ ನಮ್ಮೂರಿನ ಶೈಕ್ಷಣಿಕ ಅಭಿವೃದ್ಧಿ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಗ್ರಾಮದ ಭೌತಿಕ ಸೌಲಭ್ಯದ ಜೊತೆಗೆ ಶೈಕ್ಷಣಿಕ ಸೌಲಭ್ಯವು ಗುಣಮಟ್ಟವಾಗಿದ್ದಾಗ ಮಾತ್ರ ಉತ್ತಮವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ವಿಶ್ವನಾಥ ಮತ್ತವರ ಗೆಳೆಯರ ಬಳಗದಿಂದ ನಮ್ಮೂರಿನ ಶಾಲೆಗೆ ಶೈಕ್ಷಣಿಕ ಕೊಡುಗೆ ನೀಡಲು ಮುಂದೆಬಂದಿರುವುದು ಅತ್ಯಂತ ಹೆಮ್ಮೆಪಡುವ ವಿಷಯವಾಗಿದೆ ಈ ದಿಸೆಯಲ್ಲಿ ನಾವೆಲ್ಲರೂ ಅವರಿಗೆ ಕೈಜೋಡಿಸುವ ಮೂಲಕ ನಮ್ಮೂರಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಜ್ಞಾ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಮರತೂರ, ನಮ್ಮ ಗೆಳೆಯರ ಬಳಗದಿಂದ ನಮ್ಮ ಶಾಲೆಯಲ್ಲಿ ಇನ್ನು ಅನೇಕ ಅಭಿವೃದ್ಧಿಗೆ ಪರವಾದ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕಾರ್ಯಕ್ರಮದ ಯೋಜನೆ ರೂಪಿಸಿದ್ದು ಅವುಗಳನ್ನು ಒಂದೊಂದಾಗಿ ಅನುಷ್ಠಾನಗೊಳಿಸುವ ಯೋಜನೆ ರೂಪಿಸಿದ್ದೇವೆ ಈ ಅಭಿವೃದ್ಧಿಪರವಾದ ಕೆಲಸಕ್ಕೆ ಗ್ರಾಮದ ಜನರೆಲ್ಲರ ಸಹಕಾರ ಕೋರುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳಾಡಿದ ಶಾಲೆಯ ಮುಖ್ಯಗುರುಗಳಾದ ಮನೋಹರ್ ಅವರು ಈ ಬಾರಿಯ ಫಲಿತಾಂಶ ಸುಧಾರಿಸಲು ಶಿಕ್ಷಕರ ಜೊತೆಗೆ ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ಶಾಲೆಯನ್ನು ಮಕ್ಕಳು ಪ್ರತಿನಿತ್ಯ ಬರಬೇಕು ಹಾಗೂ ಕಲಿಯಬೇಕು ಎಂಬ ಪ್ರಯತ್ನವು ಸಾಗಿದೆ. ಸರಕಾರದ ನಿಯಾಮವಳಿಗಳ ಪ್ರಕಾರ ಶಾಲೆಯ ಸುಧಾರಣೆಗಾಗಿ ಅವಿರತ ಶ್ರಮಪಡುತ್ತಿದ್ದೇವೆ. ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಭ್ಯಾಸ ಪುಸ್ತಕ ವಿತರಿಸಲಾಯಿತು, ನೂತನ ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗುರಪ್ಪ ಕಂಬಾ, ಸಂತೋಷ ಹಿರೇಮಠ, ಗ್ರಾಮ ಪಂಚಾಯತ ಹಾಗೂ ಎಸ್.ಡಿ.ಎಂ. ಸದಸ್ಯರು, ಶಾಲಾ ಸಿಬ್ಬಂದಿ, ವಿಧ್ಯಾರ್ಥಿಗಳು ಹಾಜರಿದ್ದರು. ದೈಹಿಕ ಶಿಕ್ಷಕರಾದ ಬಸವರಾಜ ನಿರೂಪಿಸಿದರು, ಉಪನ್ಯಾಸಕರಾದ ಮೀನಿಲಕುಮಾರ ಸ್ವಾಗತಿಸಿದರು, ಶಿಕ್ಷಕಿಯಾದ ಸುಮಂಗಲ ವಂದಿಸಿದರು.