ರಾಜಕೀಯ ಪ್ರವೇಶಕ್ಕೆ ನಟ ನೀನಾಸಂ ಸತೀಶ್ ನಿರಾಸಕ್ತಿ: ಉತ್ತರ ಕರ್ನಾಟಕ ಶೈಲಿಯ ಚಲನಚಿತ್ರ ನಿರ್ಮಾಣಕ್ಕೆ ಒಲವು

ಕಲಬುರಗಿ,ಏ.15:ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ. ಬದಲಾಗಿ ಚಲನಚಿತ್ರ ರಂಗದಲ್ಲಿಯೇ ನಾನು ತೊಡಗಿಸಿಕೊಳ್ಳುವೆ. ಅದರಲ್ಲಿಯೂ ವಿಶಿಷ್ಟ ಭಾಷೆಯಾಗಿರುವ ಉತ್ತರ ಕರ್ನಾಟಕದ ಶೈಲಿಯಲ್ಲಿಯೇ ಹೊಸ ಚಲನಚಿತ್ರವನ್ನು ನಿರ್ಮಿಸುವ ಆಸಕ್ತಿಯನ್ನು ಹೊಂದಿರುವುದಾಗಿ ಖ್ಯಾತ ಕನ್ನಡ ಚಲನಚಿತ್ರ ನಟ ನೀನಾಸಂ ಸತೀಶ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಆ ಪಕ್ಷದ ಪರವಾಗಿ ಮತ್ತು ಈ ಪಕ್ಷದ ಪರವಾಗಿ ನಾನು ಪ್ರಚಾರ ಮಾಡುವ ಗೋಜಿಗೆ ಹೋಗುವುದಿಲ್ಲ. ನನಗೆ ರಾಜಕೀಯ ಹಿಡಿಸದು. ಆದಾಗ್ಯೂ, ಪ್ರತಿಯೊಬ್ಬರೂ ಮತದಾನವನ್ನು ಮಾಡಬೇಕೆಂದು ಜಾಗೃತಿ ಮೂಡಿಸುತ್ತೇನೆ. ಒಳ್ಳೆಯವರಿಗೆ ಮತ ಹಾಕಿ ಎಂದು ಹೇಳುತ್ತೇನೆ ಎಂದರು.
ನಟರು ಚುನಾವಣಾ ಪ್ರಚಾರ ಮಾಡಬಹುದು, ಇಲ್ಲದೇ ಇರಬಹುದು. ಅದು ಆಯಾ ನಟರಿಗೆ ಬಿಟ್ಟ ವಿಚಾರವಾಗಿದೆ. ನಾನು ಮಂಡ್ಯ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿದ್ದೇನೆ. ಹಾಗಾಗಿ ಎಲ್ಲರೂ ಮತ ಚಲಾಯಿಸುವಂತೆ ಹಾಗೂ ಒಳ್ಳೆಯ ವ್ಯಕ್ತಿಗೆ ಮತ ನೀಡುವಂತೆ ಮಾತ್ರ ಹೇಳಬಹುದಾಗಿದೆ ಎಂದು ಅವರು ಹೇಳಿದರು.
ನಾನು ಮೂಲತ: ಮಂಡ್ಯ ಜಿಲ್ಲೆಯವನು. ಹೀಗಾಗಿ ನನಗೆ ಆ ಭಾಷೆಯು ಅತ್ಯಂತ ಸುಲಭವಾಗಿದೆ. ಆ ಭಾಷೆಗೂ ಉತ್ತರ ಕರ್ನಾಟಕದ ಕಲಬುರ್ಗಿ, ಬಳ್ಳಾರಿ, ಬೀದರ್, ರಾಯಚೂರು, ಕೊಪ್ಪಳ್, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿಯೂ ಸಹ ವಿಶಿಷ್ಟ ಕನ್ನಡ ಭಾಷೆಯಿದೆ. ಇಲ್ಲಿಯ ಶೈಲಿಯ ಹಾಗೆ ಅಭಿನಯಿಸುವುದು ಕಷ್ಟವಾಗುತ್ತದೆ. ಹಾಗಾಗಿ ಈ ಪ್ರದೇಶದ ಶೈಲಿಯಲ್ಲಿಯೇ ತಾವು ಚಲನಚಿತ್ರವನ್ನು ಮಾಡುವ ಉದ್ದೇಶದಿಂದ ಈ ಪ್ರದೇಶದ ಒಂದಿಬ್ಬರನ್ನು ಸೇರಿಸಿಕೊಂಡು ಈ ಪ್ರದೇಶದ ಶೈಲಿಯಲ್ಲಿಯೇ ಚಲನಚಿತ್ರ ನಿರ್ಮಿಸಬೇಕು ಎಂಬ ಇಚ್ಛೆಯನ್ನು ಹೊಂದಿರುವೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕದ ಭಾಷೆಯಷ್ಟೇ ಅಲ್ಲದೇ ಅವರ ಅಹಾರ, ಆಚಾರ, ವಿಚಾರಗಳು, ಅವರಲ್ಲಿನ ಭಾವೈಕ್ಯತೆಯೂ ಸಹ ಚೆನ್ನಾಗಿದೆ. ಈ ಹಿಂದೆ ಅಯೋಗ್ಯ ಚಲನಚಿತ್ರ ಬಿಡುಗಡೆ ಸಂದರ್ಭದಲ್ಲಿ ಇಲ್ಲಿಗೆ ಬಂದು ಹೋಗಿರುವೆ. ಇಲ್ಲಿರುವ ಜನರು ನನಗೆ ಹೆಚ್ಚಿನ ರೀತಿಯಲ್ಲಿ ಬೆಂಬಲಿಸಿದರು ಎಂದು ಅಭಿಮಾನದಿಂದ ಹೇಳಿದ ಅವರು, ಶುಕ್ರವಾರದಂದು ಜರುಗಿದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಜನರು ಸೇರಿದ್ದರು. ಆ ಜನಸಾಗರವನ್ನು ನೋಡಿ ದಂಗಾದೆ ಎಂದರು.
ನಮ್ಮ ದೇಶದಲ್ಲಿ ಅತ್ಯಂತ ಮಹಾನ್ ನಾಯಕರು ಸರಳ ವ್ಯಕ್ತಿತ್ವ ಹೊಂದಿದ್ದಾರೆ. ಅವರೆಲ್ಲ ನಮಗೆ ಮಾರ್ಗದರ್ಶಕರು. ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ ಮುಂತಾದ ಪುಣ್ಯವಂತರನ್ನು ನಾವು ಪಡೆದಿದ್ದೇವೆ. ಎಲ್ಲರೂ ಜಾತಿ, ಧರ್ಮ ಬೇಧ ಭಾವ ಮಾಡದೇ ಭಾವೈಕ್ಯತೆಯಿಂದ ಸಹೋದರರಂತೆ ಬದುಕಬೇಕು. ವಿಜಯಪುರ ಸಿದ್ದೇಶ್ವರ್ ಸ್ವಾಮೀಜಿ ಅವರ ಸರಳ ವ್ಯಕ್ತಿತ್ತವು ನನ್ನ ಮೇಲೆ ಪರಿಣಾಮ ಬೀರಿದೆ. ಅಲ್ಲಿಗೆ ಹೋಗಬೇಕು ಎಂದು ಮಾಡಿದ್ದೆ. ಸಮಯದ ಕೊರತೆಯಿಂದ ಹೋಗಲಾಗಲಿಲ್ಲ ಎಂದು ಅವರು ತಿಳಿಸಿದರು.
ನಟಿ ರಚಿತಾರಾಮ್ ಅವರೊಂದಿಗೆ ಅಭಿನಯಿಸಿದ ಮ್ಯಾಟ್ನಿ ಚಲನಚಿತ್ರವು ಶೀಘ್ರ ಬಿಡುಗಡೆ ಆಗಲಿದೆ. ಸುಮಾರು 15 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನನ್ನ ಅಭಿನಯದ ಅಶೋಕ್ ಬ್ಲೇಡ್ ಚಲನಚಿತ್ರವು ಇದೇ ವರ್ಷದ ಅಂತ್ಯದೊಳಗೆ ಬಿಡುಗಡೆ ಆಗಲಿದೆ. ಚಲನಚಿತ್ರವು ಕನ್ನಡ, ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿಯೂ ನಿರ್ಮಾಣವಾಗಿದೆ. ಇದೊಂದು ಕಮಷಿರ್ಯಲ್ ಚಲನಚಿತ್ರವಾಗಿದೆ. ಈಗಾಗಲೇ ಶೇಕಡಾ 90ರಷ್ಟು ಚಿತ್ರೀಕರಣ ಆಗಿದೆ. ಇದೇ ಏಪ್ರಿಲ್ 28ರಂದು ಪೋಸ್ಟರ್ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಿನೇಶ್ ದೊಡ್ಡಮನಿ, ಸಂಪತ್ ಸುಬ್ಬಯ್ಯ, ಡಾ. ಅನಿಲ್ ತೆಂಗಳಿ, ಶಿವಾ ನರೋಣಾ ಮುಂತಾದವರು ಉಪಸ್ಥಿತರಿದ್ದರು.