ರಾಜಕೀಯ ಪ್ರವೇಶಕ್ಕೆ ಗಂಗೂಲಿಗೆ ಒತ್ತಡ

ಕೊಲ್ಕತ್ತಾ, ಜ. ೪- ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಭಾರತ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ರಾಜಕೀಯ ಪ್ರವೇಶಕ್ಕೆ ಒತ್ತಡ ಹೇರಲಾಗಿತ್ತು ಎಂದು ಮಾಜಿ ಸಚಿವ ಹಾಗೂ ಸಿಪಿಎಂನ ಹಿರಿಯ ಮುಖಂಡ ಅಶೋಕ್ ಭಟ್ಟಾಚಾರ್ಯ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ಸುದ್ದಿಗೆ ಗ್ರಾಸವಾಗಿದೆ.
ಭಾರತ ಕ್ರಿಟೆಕ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಬ್ಲಾಸ್ಟ್ ಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಏಪ್ರಿಲ್, ಮೇನಲ್ಲಿ ನಡೆಯಲಿರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಗಂಗೂಲಿ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಹಬ್ಬಿದ್ದವಾದರೂ ಗಂಗೂಲಿ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ, ಗಂಗೂಲಿ ಅವರಿಗೆ ರಾಜಕೀಯ ಸೇರುವಂತೆ ಒತ್ತಡ ಹೇರಲಾಗಿತ್ತು. ಅವರನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳಲು ಬಯಸಿದ್ದರು. ಅವರ ಮೇಲೆ ಒತ್ತಡ ಹೆಚ್ಚಾಗಿತ್ತು ಎಂದು ಗಂಗೂಲಿ ಕುಟುಂಬದ ಸ್ನೇಹಿತರೂ ಆಗಿರುವ ಆಶೋಕ್ ಭಟ್ಟಾಚಾರ್ಯ ಹೇಳಿಕೆ ಪಶ್ಚಿಮಬಂಗಾಳದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸೌರವಗಂಗೂಲಿ ಅವರನ್ನು ಕ್ರೀಡಾ ಹೈಕಾನ್ ಆಗಿಯೇ ಗುರುತಿಸಬೇಕು. ರಾಜಕೀಯಕಕ್ಕೆ ಸೇರಲು ಅವರ ಮೇಲೆ ಯಾರೂ ಒತ್ತಡ ಹೇರಬಾರದು. ನಾನಂತೂ ಗಂಗೂಲಿ ಅವರಿಗೆ ರಾಜಕೀಯ ಬೇಡ ಎಂದು ಹೇಳಿದ್ದೇನೆ. ಅವರು ಅದನ್ನು ವಿರೋಧಿಸಲಿಲ್ಲ ಎಂದು ಗಂಗೂಲಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಬಳಿಕ ಅಶೋಕ್ ಭಟ್ಟಾಚಾರ್ಯ ಸುದ್ದಿಗಾರರಿಗೆ ತಿಳಿಸಿದರು.
ಮಾಜಿ ಸಚಿವ ಅಶೋಕ್ ಭಟ್ಟಾಚಾರ್ಯ ಅವರ ಮಾತುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಕೆಲವರು ಕೆಟ್ಟ ಮನಸ್ಥಿತಿಯಿಂದಾಗಿ ಎಲ್ಲದರಲ್ಲೂ ರಾಜಕೀಯವನ್ನು ಹುಡುಕುತ್ತಾರೆ. ಲಕ್ಷಾಂತರ ಅಭಿಮಾನಿಗಳಂತೆ ಸೌರವ್ ಗಂಗೂಲಿ ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಅವರು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್‌ನ ಹಿರಿಯ ಮುಖಂಡ ಶೋಭನ್‌ದೇಬ್ ಚಟರ್ಜಿ ಸಹ ಗಂಗೂಲಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದು, ಗಂಗೂಲಿ ಅವರನ್ನು ತೃಣಮೂಲ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಯಾವುದೇ ಪ್ರಯತ್ನಗಳನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಪ್ರವೇಶದ ಒತ್ತಡದ ಕಾರಣದಿಂದಲೇ ಗಂಗೂಲಿ ಅವರಿಗೆ ಲಘು ಹೃದಯಾಘಾತವಾಗಿದೆ ಎಂಬ ಸುದ್ದಿ ಪಶ್ಚಿಮಬಂಗಾಳದಾದ್ಯಂತ ಹರಡಿದೆ. ಅದಕ್ಕೆ ಪುಷ್ಠಿ ನೀಡುವಂತೆ ಅವರ ಕುಟುಂಬದ ಸ್ನೇಹಿತ ಹಾಗೂ ಮಾಜಿ ಸಚಿವ ಸಿಪಿಎಂನ ಅಶೋಕ್ ಭಟ್ಟಾಚಾರ್ಯ ರವರ ಹೇಳಿಕೆ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.