ರಾಜಕೀಯ ಪಕ್ಷಗಳ ಬ್ಯಾನರ್ ತೆರವು

ದೇವದುರ್ಗ,ಮಾ.೩೦- ರಾಜ್ಯ ವಿಧಾನಸಭೆ ಚುನಾವಣೆ ನೀತಿ ಸಂಹಿತಿ ಜಾರಿಯಾದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ರಾಜಕೀಯ ಪಕ್ಷಗಳು ಅಳವಡಿಸಿದ್ದ ಬ್ಯಾನರ್, ಪ್ಲೇಕ್ಸ್, ಪಕ್ಷಗಳ ಬಾವುಟಗಳನ್ನು ಪುರಸಭೆ ಕಾರ್ಯಾಚರಣೆ ನಡೆಸಿ ಬುಧವಾರ ತೆರವುಗೊಳಿಸಿತ್ತು.
ಪಟ್ಟಣದ ಜಹಿರುದ್ದೀನ್ ಪಾಷಾ ವೃತ್ತ, ಬಸ್ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ, ಮಿನಿವಿಧಾನಸೌಧ ಮುಂಭಾಗ, ರಾಯಚೂರು, ಜಾಲಹಳ್ಳಿ ಹಾಗೂ ಶಹಾಪುರ ರಸ್ತೆಯಲ್ಲಿ ಅಳವಡಿಸಿದ್ದ ಬೃಹತ್ ಬ್ಯಾನರ್‌ಗಳು, ಪ್ಲೆಕ್ಸ್, ಪಕ್ಷಗಳ ಬಾವುಟ, ಧ್ವಜವನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು. ಪುರಸಭೆ ಕಸದ ವಾಹನದಲ್ಲಿ ಪಟ್ಟಣದ ಮೂಲೆಮೂಲೆಯಲ್ಲಿ ಸಂಚರಿಸಿದ ಸಿಬ್ಬಂದಿ ಯಾವುದನ್ನೂ ಬಿಡದಂತೆ ತೆರವು ಮಾಡಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಜಾಹೀರಾತು ಫಲಕಗಳನ್ನೂ ತೆಗೆಯಲಾಯಿತು.
ಇತ್ತೀಚೆಗೆ ತಾಲೂಕಿನ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭರ್ಜರಿ ಕಾರ್ಯಕ್ರಮ ಆಯೋಜಿಸಿ ಎಲ್ಲೆಡೆ ಬ್ಯಾನರ್, ಪ್ಲೆಕ್, ಬಾವುಟ ಕಟ್ಟಲಾಗಿತ್ತು. ಪಟ್ಟಣದ ತುಂಬೆಲ್ಲ ಮೂರೂ ಪಕ್ಷದ ಬ್ಯಾನರ್ ರಾರಾಜಿಸುತ್ತಿದ್ದವು. ಕೆಲವು ಕಡೆಗಳಲ್ಲಿ ಅಂಗಡಿ, ಮುಂಗಟ್ಟು, ವ್ಯಾಪಾರಿಗಳಿಗೆ ಕಿರಿಕಿರಿ ಉಂಟುಮಾಡಿತ್ತು. ತೆರವು ಕಾರ್ಯದಿಂದ ಸ್ವಲ್ಪ ಮಟ್ಟಿನ ಸ್ವಚ್ಛತೆ ಕಾಣಬಹುದಾಗಿದೆ.

ಕೋಟ್=====
ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಟ್ಟಣದ ವಿವಿಧೆ ಅಳವಡಿಸಿದ್ದ ರಾಜಕೀಯ ಪಕ್ಷಗಳ ಬ್ಯಾನರ್, ಪ್ಲೆಕ್ಸ್, ಬಾವುಟ ಸೇರಿ ಎಲ್ಲವನ್ನೂ ತೆರವುಗೊಳಿಸಲಾಗಿದೆ. ಖಾಸಗಿ ಬ್ಯಾನರ್‌ಗಳನ್ನೂ ತೆಗೆದುಹಾಕಲಾಗಿದೆ.