ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿ ದುರಗೇಶ ರುದ್ರಾಕ್ಷಿ

ಕಲಬುರಗಿ,ಡಿ.4:ಗುಲಬರ್ಗಾ ಸ್ಥಳೀಯ ಸಂಸ್ಥೆಗಳಿಂದ ಇದೇ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಅಪರ ಜಿಲ್ಲಾಧಿಕಾರಿ ದುರಗೇಶ ರುದ್ರಾಕ್ಷಿ ಅವರು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ದುರಗೇಶ ರುದ್ರಾಕ್ಷಿ ಅವರು ಡಿ.10 ಮತದಾನ ದಿನದಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನಕ್ಕೆ ಅವಕಾಶವಿದ್ದು, ಜಿಲ್ಲೆಯ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಅಧಿಸೂಚಿತ ಕ್ಷೇತ್ರ ಸಮಿತಿ, ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಮತದಾನ ನಡೆಯಲಿದೆ. ಅನಕ್ಷರಸ್ಥ ಮತ್ತು ದೃಷ್ಠಿಹೀನ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಸ್ಥಳೀಯ ಪಿ.ಡಿ.ಓಗಳು ಓರ್ವರನ್ನು ಸಹಾಯಕರನ್ನಾಗಿ ನಿಯೋಜಿಸಲಿದ್ದಾರೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ 4644 ಮತ್ತು ಯಾದಗಿರಿ ಜಿಲ್ಲೆಯಲ್ಲಿ 2458 ಸೇರಿದಂತೆ ಒಟ್ಟು 7102 ಮತದಾರರಿದ್ದು, ಕ್ರಮವಾಗಿ 265 ಮತ್ತು 126 ಮತಗಟ್ಟೆ ಸ್ಥಾಪಿಸಲಾಗಿದೆ. ಜಿಲ್ಲೆಯ 265 ಮತಗಟ್ಟೆಗಳ ಪೈಕಿ 82 ಮತಗಟ್ಟೆಗಳನ್ನು ಕ್ರಿಟಿಕಲ್, 182 ನಾನ್ ಕ್ರಿಟಿಕಲ್ ಹಾಗೂ 1 ಮತಗಟ್ಟೆಯನ್ನು ವಲ್‍ನರೇಬಲ್ ಮತಗಟ್ಟೆ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿನ ಮತದಾನಕ್ಕೆ ತಲಾ 265 ಜನ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಿ ಈಗಾಗಲೆ ತರಬೇತಿ ನೀಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 54 ಜನ ಅಧಿಕಾರಿಗಳನ್ನು ಮೀಸಲಿಡಲಾಗಿದೆ ಎಂದರು.
ಪ್ರತಿ ಮತಗಟ್ಟೆಗೆ ಓರ್ವರನ್ನು ಮೈಕ್ರೋ ವೀಕ್ಷಕರನ್ನಾಗಿ ನೇಮಿಸಲಾಗುತ್ತಿದ್ದು, ಮತದಾನ ಕೆಂದ್ರದ ಸುತ್ತಮುತ್ತ 100 ಮೀಟರ್ ನಿಷೇಧಿತ ಪ್ರದೇಶವಿರಲಿದೆ ಎಂದರು.
ಚುನಾವಣೆ ಸೂಸೂತ್ರವಾಗಿ ನಡೆಯಲು ಜಿಲ್ಲೆಯಾದ್ಯಂತ 64 ಜನ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಉಳಿದಂತೆ 36 ಎಫ್.ಎಸ್.ಟಿ. ತಂಡ, 24 ಎಸ್.ಎಸ್.ಟಿ. ತಂಡ, 12 ವಿ.ಎಸ್.ಟಿ. ತಂಡ ಹಾಗೂ 12 ವಿ.ವಿ.ಟಿ. ತಂಡಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಲು ನೇಮಿಸಿದೆ. ಚುನಾವಣೆ ಸಂಬಂಧಿಸಿದಂತೆ ಯಾವುದೇ ಅನುಮತಿಗೆ ಕಲಬುರಗಿ ನಗರದಲ್ಲಿ ಮಹಾನಗರ ಪಾಲಿಕೆ ಆಯುಕ್ತರನ್ನು ಮತ್ತು ತಾಲೂಕು ಹಂತದಲ್ಲಿ ತಹಶೀಲ್ದಾರರನ್ನು ಸಂಪರ್ಕಿಸಬೇಕು ಎಂದು ದುರಗೇಶ ರುದ್ರಾಕ್ಷಿ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿವರಿಸಿದರು.
ಸಭೆಯಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳ ಮುಖಂಡರು ಮತದಾನ ದಿನದಂದು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆವಿರುವುದರಿಂದ ಪೊಲೀಸ್ ಸಿಬ್ಬಂದಿಗಳನ್ನು ತಾಲೂಕಿನಿಂದ ತಾಲೂಕಿಗೆ ನಿಯೋಜಿಸಬೇಕೆಂದು ಮನವಿ ಮಾಡಿದರು. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎ.ಡಿ.ಸಿ. ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ ಮಹಾಂತೇಶ ಮುಡಬಿ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರಿದ್ದರು.