
ಬಳ್ಳಾರಿ,ಏ.16: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ನಿರ್ದೇಶನದನ್ವಯ ಸುಗಮ ಮತದಾನಕ್ಕಾಗಿ ಜಿಲ್ಲೆಯಲ್ಲಿ 31 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರದಂದು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಯಾವುದೇ ಮತಗಟ್ಟೆಯಲ್ಲಿ 1500 ಕ್ಕೂ ಹೆಚ್ಚು ಮತದಾರರಿದ್ದಲ್ಲಿ, ಅಂತಹ ಕಡೆ ಮತಗಟ್ಟೆ ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡ ಹಾಗೂ ಮತದಾನಕ್ಕೆ ನಿಗದಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅಂತಹ ಕಡೆ ಹೆಚ್ಚುವರಿ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಕಾರಣಕ್ಕಾಗಿ ಒಟ್ಟು 31 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಕಂಪ್ಲಿ ಕ್ಷೇತ್ರದಲ್ಲಿ 01, ಸಿರಗುಪ್ಪ-01, ಬಳ್ಳಾರಿ ಗ್ರಾಮೀಣ-08, ಬಳ್ಳಾರಿ ನಗರ-19 ಹಾಗೂ ಸಂಡೂರು ಕ್ಷೇತ್ರದಲ್ಲಿ 02 ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. 1300 ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳಿಗೆ ಸುಗಮ ಕಾರ್ಯಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಎಂದರು.
ಒಟ್ಟು ಮತಗಟ್ಟೆಗಳು : ಜಿಲ್ಲೆಯಲ್ಲಿ ಹೆಚ್ಚುವರಿ 31 ಮತಗಟ್ಟೆಗಳ ಸ್ಥಾಪನೆ ಬಳಿಕ ಕ್ಷೇತ್ರವಾರು ಮತಗಟ್ಟೆಗಳ ಸಂಖ್ಯೆ ವಿವರ ಇಂತಿದೆ. ಕಂಪ್ಲಿ-240, ಸಿರಗುಪ್ಪ-227, ಬಳ್ಳಾರಿ ಗ್ರಾಮೀಣ-242, ಬಳ್ಳಾರಿ ನಗರ-262, ಸಂಡೂರು ಕ್ಷೇತ್ರದಲ್ಲಿ ಒಟ್ಟು 251 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1222 ಮತಗಟ್ಟೆಗಳಾದಂತಾಗಿದೆ.
ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಇದನ್ನು ಪಾಲಿಸಬೇಕು. ಪಟಾಕಿ ಸಿಡಿಸಲು ಅವಕಾಶವಿಲ್ಲ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕೇಸ್ ದಾಖಲಿಸಲಾಗುವುದು. ಱ್ಯಾಲಿ, ಮೆರವಣಿಗೆಗಳಿಗೆ ನಿಯಮಾನುಸಾರ ಅನುಮತಿ ಪಡೆಯಬೇಕು. ಅನುಮತಿ ರಹಿತ ಹಾಗೂ ಹೆಚ್ಚುವರಿ ವಾಹನಗಳಿದ್ದಲ್ಲಿ ವಶಕ್ಕೆ ಪಡೆದುಕೊಳ್ಳಲಾಗುವುದು. ಮೆರವಣಿಗೆಗೆ ಅರ್ಜಿ ಸಲ್ಲಿಸುವಾಗ, ಮೆರವಣಿಗೆಯ ಪ್ರಾರಂಭ ಹಾಗೂ ಮುಕ್ತಾಯದ ಸ್ಥಳ ಹಾಗೂ ಸಮಯವನ್ನು ನಮೂದಿಸಿ ಅನುಮತಿ ಪಡೆಯಬೇಕು, ಅಲ್ಲದೆ ಪಡೆದ ಅನುಮತಿಯಂತೆಯೇ ನಿಯಮ ಹಾಗೂ ಷರತ್ತುಗಳನ್ನು ಪಾಲಿಸಬೇಕು. ರಾತ್ರಿ 10 ರ ಬಳಿಕ ಪ್ರಚಾರ ಕಾರ್ಯವನ್ನು ನಿಷೇಧಿಸಿದ್ದು, ಈ ರೀತಿಯ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಪ್ರತಿ ಅಭ್ಯರ್ಥಿಗೆ ಗರಿಷ್ಠ ವೆಚ್ಚ 40 ಲಕ್ಷಗಳನ್ನು ನಿಗದಿಪಡಿಸಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಪ್ರಚಾರ ಚಟುವಟಿಕೆಗಳನ್ನು ನಡೆಸಬೇಕು, ನಮ್ಮ ಎಫ್‍ಎಸ್‍ಟಿ, ವಿಎಸ್‍ಟಿ, ಫ್ಲೈಯಿಂಗ್ ಸ್ಕ್ವಾಡ್‍ಗಳು ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದು, ನಾವೂ ಕೂಡ ಅಭ್ಯರ್ಥಿಯ ಚುನಾವಣಾ ವೆಚ್ಚದ ಲೆಕ್ಕ ಇರಿಸಿಕೊಳ್ಳುತ್ತೇವೆ. ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಗದಿತ ಮೊತ್ತಕ್ಕಿಂತ ಹೆಚ್ಚು ವೆಚ್ಚವಾದಲ್ಲಿ, ಅಂತಹ ಅಭ್ಯರ್ಥಿಗಳೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ವಿಷಯವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಅಭ್ಯರ್ಥಿಗಳ ಗಮನಕ್ಕೆ ತಂದು ಮನವರಿಕೆ ಮಾಡಿಕೊಡಬೇಕು. ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು