ರಾಜಕೀಯ ಪಕ್ಷಗಳು ತಮ್ಮ ಕಾರ್ಯಕ್ರಮ ಪಟ್ಟಿ ಮುಂಚಿತವಾಗಿ ಸಲ್ಲಿಸಿ: ಡಿ.ಸಿ

ಬೀದರ.ಮಾ.23: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಚುನಾವಣಾ ಮತಯಂತ್ರಗಳ ರ್ಯಾಂಡಾಮಿಜೇಷನ್ ಪ್ರಕ್ರಿಯೆ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ 326 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ 457 ಬಿಯು, 457 ಸಿಯು ಮತ್ತು 489 ವಿವಿಪ್ಯಾಟ್ ಯಂತ್ರಗಳನ್ನು ಒದಗಿಸಲಾಗುತ್ತಿದೆ. ಚುನಾವಣಾ ಪ್ರಕ್ರಿಯೆಯು ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಬಿಯು ಮತ್ತು ಸಿಯುಗಳನ್ನು ಶೇ.40ರಷ್ಟು ಮತ್ತು ವಿವಿಪ್ಯಾಟಗಳನ್ನು ಶೇ.50 ರಷ್ಟು ಹೆಚ್ಚಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ಪಟ್ಟಿ ಮುಂಚಿತವಾಗಿ ಸಲ್ಲಿಸಿ: ಇಡೀ ರಾಜ್ಯದಲ್ಲಿ ಬೀದರನಲ್ಲಿ ಕೋವಿಡ್-19 ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ. ರಾಜಕೀಯ ಪಕ್ಷಗಳು ಕಾರ್ಯಕ್ರಮಗಳನ್ನು ಮಾಡುವುದಾದರೆ ಅವುಗಳ ಪಟ್ಟಿಯನ್ನು ಮುಂಚಿತವಾಗಿ ಸಲ್ಲಿಸಬೇಕು. ತೆರೆದ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಿದರೆ 500 ಜನರಿಗೆ ಮತ್ತು ಸಭಾಂಗಣದಂತಹ ಮುಚ್ಚಿದ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಿದರೆ 200ಕ್ಕಿಂತ ಹೆಚ್ಚಿನ ಜನರನ್ನು ಸೇರಿಸಬಾರದು ಎನ್ನುವ ನಿಯಮ ಪಾಲನೆ ಮಾಡದೇ ಕಾರ್ಯಕ್ರಮ ನಡೆಸುವುದು ಕಂಡು ಬಂದರೆ ಮುಂದಿನ ಯಾವುದೇ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಿಸಲಾಗುವುದು ಎಂದು ತಿಳಿಸಿದರು.

ದರಪಟ್ಟಿಗೆ ಒಪ್ಪಿಗೆ: ಚುನಾವಣಾ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಬಳಸುವ ಖುರ್ಚಿ, ಬ್ಯಾನರ್, ಪಾಂಪಲೇಟ್ ಸೇರಿದಂತೆ ಇನ್ನೀತರ ಸಾಮಗ್ರಿಗಳಿಗೆ ಸಂಬಂಧಿಸಿದ ದರಪಟ್ಟಿಗೆ ಇದೆ ವೇಳೆ ಸಭೆಯಲ್ಲಿ ಹಾಜರಿದ್ದ ರಾಜಕೀಯ ಪಕ್ಷಗಳ ಮುಖಂಡರಿಂದ ಒಪ್ಪಿಗೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಮತ್ತು ಇನ್ನೀತರರು ಇದ್ದರು.