ರಾಜಕೀಯ ನಾಯಕರು ಸಮಯಕ್ಕೆ ಅಷ್ಟೆ : ಹಳ್ಳಿಹಕ್ಕಿ

ಮೈಸೂರು, ಜ.13: ರಾಜಕೀಯ ನಾಯಕರು ಸಮಯಕ್ಕೆ ಅಷ್ಟೆ. ನಾಯಕರಲ್ಲಿ ಕೃತಜ್ಞತೆ ಇಲ್ಲ ಎಂದು ತಮಗೆ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಬೇಸರವನ್ನು ಹೊರಹಾಕಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ. ಆ ಸಿದ್ದರಾಮಯ್ಯ ಕರೆದುಕೊಂಡು ಬಂದ್ವಿ ಅವರು ಹೇಳಲಿಲ್ಲ. ಯಡಿಯೂರಪ್ಪ ಗೆ ತ್ಯಾಗ ಮಾಡಿದ್ವಿ ಅವರು ಹೇಳಲಿಲ್ಲ. ಯಡಿಯೂರಪ್ಪ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ತಾವು ಕೊಟ್ಟಿದ್ದ ಮಾತು ಕಳೆದುಕೊಂಡಿದ್ದಾರೆ. ಯಡಿಯೂರಪ್ಪ ನೆನಪು ಮಾಡಿಕೊಳ್ಳಬೇಕು ಯಾರಿಂದ ಸರ್ಕಾರ ಬಂತು ಅಂತ. 17 ಜನರ ಭಿಕ್ಷೆಯಲ್ಲಿ ಸರ್ಕಾರ ಇದೆ. ಅವರ ತ್ಯಾಗದಿಂದ ಸರ್ಕಾರ ಬಂದಿದೆ ಅದನ್ನು ನೆನಪು ಮಾಡಿಕೊಳ್ಳಿ ಎಂದು ಸಿಎಂ ಬಿಎಸ್ ವೈ ವಿರುದ್ಧ ಎಂಎಲ್‍ಸಿ ಹೆಚ್.ವಿಶ್ವನಾಥ್ ಮಂತ್ರಿ ಸ್ಥಾನ ಸಿಗದ್ದಕ್ಕೆ ಅಸ ಮಾಧಾನ ಹೊರಹಾಕಿದರು.
ಯಡ್ಯೂರಪ್ಪನವರೇ ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆದು ಮಾಡೋಲ್ಲ. ಕೊಟ್ಟ ಮಾತು ಉಳಿಕೊಳ್ಳದ ನಿಮ್ಮನ್ನು ಸಿದ್ಧಲಿಂಗೇಶ್ವರನು ಕ್ಷಮಿಸಲ್ಲ. ನೀವು ಎಂತ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ 33 ರಲ್ಲೂ 13 ವೀರಶೈವ, 11 ಜನ ಒಕ್ಕಲಿಗ,4 ಜನ ಕುರುಬರಿಗೆ ಮಂತ್ರಿ ಕೊಟ್ಟಿದ್ದೀರಾ. ಇದೇನಾ ನಿಮ್ಮ ಸಾಮಾಜಿಕ ನ್ಯಾಯ?. ನಾಗೇಶ್ ರನ್ನು ಯಾಕೇ ತೆಗೆಯಬೇಕು. ಮುನಿರತ್ನ ಬದಲು ಯೋಗೇಶ್ವರ್ ಯಾಕೇ ಕೊಡ್ತೀರಾ ಹೇಳಿ. ಕೋರ್ಟ್ ಗೂ ನನಗೆ ಮಂತ್ರಿ ಸ್ಥಾನ ಕೊಡೋದಕ್ಕೂ ಸಂಬಂಧ ಇಲ್ಲ. ಆ ಸೈನಿಕನ ಮೇಲೆ 420 ಕೇಸ್ ಇದೆ. ಅವನನ್ನು ಸಚಿವನನ್ನಾಗಿ ಮಾಡೋಕೆ ದುಂಬಾಲು ಬಿದ್ದಿದ್ದೀರಾ. ಯಾಕೇ ಎಲ್ಲಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ ಹೇಳಿ. ಏನಾದರೂ ಬ್ಲಾಕ್ ಮೇಲ್ ಮಾಡ್ತಿದ್ತಾನಾ ಅವನು. ಅವನೇನು ರಾಜೀನಾಮೆ ಕೊಟ್ಟಿದ್ನಾ. ಅಥವಾ ನೀವು ಸೈನಿಕನ ಕೈಗೊಂಬೆ ಆಗಿದ್ದೀರಾ? ನಿಮ್ಮ ಮಾಜಿ ಪಿಎ ಬ್ಲಾಕ್ ಮೇಲ್ ಸಚಿವ ಸ್ಥಾನ ಪಡೆದುಕೊಂಡ್ರಾ ಹೇಳಿ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರೇ ನಿಮ್ಮಿಂದ ಏನಾದ್ರು ನಿರೀಕ್ಷೆ ಮಾಡಿದ್ನಾ ನಾನು. ಸ್ನೇಹದಲ್ಲಿ ಇದ್ದುದ್ದಕ್ಕೆ ನಿಮಗೆ ಸಹಾಯ ಮಾಡಿದ್ವಿ. ಆದರೆ ನೀವೇನು ಮಾಡಿದ್ರಿ ಹೇಳಿ. ನೀವು ಏನು ಮಾತು ಕೊಟ್ಟಿದ್ರಿ ಅಂತ ಹೇಳಿ. ಬನ್ನಿ ಬೇಕಿದ್ರೆ ಯಡಿಯೂರಿಗೆ ಹೋಗೋಣ ಏನಾಯ್ತು ಅಂತ ಅಲ್ಲೇ ಮಾತನಾಡೋಣ. ನಾವು ಯಡ್ಯೂರಪ್ಪರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನು ಸಿಎಂ ಮಾಡಿದ್ದೆ ಈ 17 ಜನ. ನಿಮ್ಮ ಸಂಪುಟದಲ್ಲಿ ಎಲ್ಲರೂ ಇರಬೇಕು. ಮುಸ್ಲಿಂ ಕೂಡ ಇರಬೇಕು. ಎಲ್ಲ ಜಾತಿ ಜನಾಂಗ ಇರಬೇಕು. ಆದರೆ ಇಲ್ಲೇನಾಗಿದೆ. ನಾಡಿನಲ್ಲಿ ನಾಲಿಗೆಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾವೇ ಆದರೆ ಅದೆಲ್ಲ ಏನಾಯ್ತು ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಯೋಗೇಶ್ವರ್ ಮಂತ್ರಿ ಆಗೋಕೆ ವಿಜಯೇಂದ್ರ ಕಾರಣ. ಅದೇ ರೀತಿ ಯಡ್ಯೂರಪ್ಪರ ಪ್ರತಿಷ್ಠೆ ಡೆಮಾಲೀಷ್ ಆಗುವುದಕ್ಕೆ ವಿಜಯೇಂದ್ರರೇ ಕಾರಣ ಎಂದು ಆರೋಪಿಸಿದರು. ಇಡೀ ವಿಧಾನಸೌಧದಲ್ಲಿ ಅವರ ಅಣ್ಣ ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಎಲ್ಲದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ.
ಕರ್ನಾಟಕಕ್ಕೆ ಯಡ್ಯೂರಪ್ಪರೇ ಹೈಕಮಾಂಡ್. ಯೋಗೇಶ್ವರ್ ರಿಂದ ಬ್ಲಾಕ್ ಮೇಲ್ ತಂತ್ರ. ಅವರ ಬ್ಲಾಕ್ ಮೇಲ್ ಏನಂತ ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತೆ. ರಾಜ್ಯದಲ್ಲಿ ಸಚಿವರಾಗೋಕೆ ಬ್ಯಾಗ್ ಹಿಡಿದುಕೊಳ್ಳೋದೆ ಮಾನದಂಡವೇ.? ಯೋಗೇಶ್ವರ್ ಗೆ ಬಾಂಬೆಯಲ್ಲಿ ಬ್ಯಾಗ್ ಹಿಡಿದ್ದಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ನೋವಾಗಿದೆ. ನಾವು ಮನುಷ್ಯರು ನಮಗೂ ಹೃದಯ ಇದೆ ನಮಗೂ ನೋವಾಗುತ್ತೆ ಎಂದರು.