ರಾಜಕೀಯ ದ್ವೇಷಕ್ಕೆ ರೈತನ ಬೆಳೆ ಹಾಳು

ಬಾಬುಅಲಿ ಕರಿಗುಡ್ಡ
ದೇವದುರ್ಗ.ರಿ.೨- ಗ್ರಾ.ಪಂ ಚುನಾವಣೆ ಫಲಿತಾಂಶದ ನಂತರ ರಾಜಕೀಯ ದ್ವೇಷ ಮುಂದುವರಿದಿದ್ದು, ತಾಲೂಕಿನ ಹೊನ್ನಕಾಟಮಳ್ಳಿ ಗ್ರಾಮದಲ್ಲಿ ರೈತನ ಮೆಣಸಿನಕಾಯಿ ಬೆಳೆಯನ್ನು ಗುರುವಾರ ತಡರಾತ್ರಿ ಕಿಡಿಗೇಡಿಗಳು ನಾಶ ಮಾಡಿದ್ದಾರೆ.
ಗ್ರಾಮದ ರೈತ ಕಾಸೀಂಸಾಬ್ ಪಿಲಿಗುಂಡ ೨ಎಕರೆ ಜಮೀನಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆದಿದ್ದರು. ಬೆಳೆ ಸಮೃದ್ಧವಾಗಿ ಬೆಳೆದು, ಉತ್ತಮ ಫಸಲು ಹಿಡಿದಿತ್ತು. ಆದರೆ, ರಾಜಕೀಯ ದ್ವೇಷದಿಂದ ತಡ ರಾತ್ರಿ ಕಿಡಿಗೇಡಿಗಳು ರೈತನ ಜಮೀನಿಗೆ ನುಗ್ಗಿ ದೊಣ್ಣೆ, ಕುಡುಗೋಲು, ಕೊಡ್ಲಿ ಸೇರಿ ಕೈಗೆ ಸಿಕ್ಕ ವಸ್ತುಗಳಿಂದ ಬೆಳೆ ಕತ್ತರಿ ಹಾಕಿದ್ದಾರೆ.
ಗ್ರಾಪಂ ಚುನಾವಣೆಯಲ್ಲಿ ರೈತ ಕಾಸೀಂಸಾಬ್ ಪಿಲಿಗುಂಡ ಮಾವ ಬಾಬು ಸೈಯದ್ ಖಾನ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ರೈತ ಕಾಸೀಂಸಾಬ್ ಪಿಲಿಗುಂಡ ಮಾವನ ಪರ ಪ್ರಚಾರ ನಡೆಸಿದ್ದರು. ಫಲಿತಾಂಶ ಬಂದ ಮಾರನೆ ದಿನ ರಾಜಕೀಯ ದ್ವೇಷದಿಂದ ಬೆಳೆ ನಾಶಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪಟ್ಟಣ ಠಾಣೆಗೆ ರೈತ ದೂರು ನೀಡಿದ್ದು, ಪೊಲೀಸರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತನ ಜಮೀನಿಗೆ ಭೇಟಿನೀಡಿ ಬೆಳೆನಾಶದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇಷ್ಟುದಿನ ಗ್ರಾಮದಲ್ಲಿ ಇಂಥ ಘಟನೆಗಳು ಯಾವುದೂ ನಡೆದಿಲ್ಲ. ಗ್ರಾಪಂ ಫಲಿತಾಂಶ ನಂತರ ಬೆಳೆನಾಶ ಮಾಡಿರುವುದು ಗ್ರಾಮಸ್ಥರಿಗೆ ಆತಂಕ ತಂದೊಡ್ಡಿದೆ. ಗ್ರಾಮದಲ್ಲಿ ೨ವಾರ್ಡ್‌ಗಳಲ್ಲಿ ೧೭೦೦ಮತದಾರರಿದ್ದು ಐವರು ಆಯ್ಕೆಯಾಗಿದ್ದು, ಬಾಬು ಸೈಯದ್‌ಖಾನ್ ಒಬ್ಬರು.
ಕಣ್ಣೀರಿನಲ್ಲಿ ಕುಟುಂಬ:
ಎರಡು ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬ್ಯಾಡಗಿ ಮೆಣಸಿನಕಾಯಿ ಬೆಳೆಯನ್ನು ಕಿಡಿಗೇಡಿಗಳು ನಾಶ ಮಾಡಿದ್ದರಿಂದ ರೈತ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಬೀಜ, ಕ್ರಿಮಿನಾಶಕ, ರಸಗೊಬ್ಬರ ಸೇರಿ ಸುಮಾರು ೫ಲಕ್ಷ ರೂ. ವೆಚ್ಚ ಮಾಡಿದ್ದರು. ಬೆಳೆ ಫಲಹಿಡಿದು ಕೆಂಪುಕಾಯಿಗಳು ಬಿಟ್ಟಿದ್ದವು. ರಾತ್ರೋರಾತ್ರಿ ಬೆಳೆ ನಾಶವಾದ ಕಾರಣ ರೈತನಿಗೆ ೧೨ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಇದರಿಂದ ರೈತ ಕಾಸೀಂ ತಲೆಮೇಲೆ ಕೈಹೊತ್ತು ಕೂಡುವಂತಾಗಿದ್ದು, ಮಾಡಿದ ಸಾಲ ಹೇಗೆ ತೀರಿಸಬೇಕು ಎನ್ನುವ ಚಿಂತೆಯಲ್ಲಿದ್ದಾರೆ. ಚುನಾವಣೆ ಮುಗಿದರೂ ರಾಜಕೀಯ ದ್ವೇಷ ಮುಂದುವರಿಸಿರುವುದು ಆತಂಕ ಮೂಡಿಸಿದೆ.

ಕೋಟ್=====

ರಾಜಕೀಯ ದ್ವೇಷದಿಂದ ನಮ್ಮ ಜಮೀನಲ್ಲಿ ಬೆಳೆದಿದ್ದು ಮೆಣಸಿನಕಾಯಿ ಬೆಳೆ ನಾಶ ಮಾಡಿದ್ದಾರೆ. ೨ಎರಕೆ ಬೆಳೆಗೆ ಸಾಲಮಾಡಿ ಸುಮಾರು ೪.೫-೫ಲಕ್ಷ ರೂ. ವೆಚ್ಚ ಮಾಡಿದ್ದೆ. ಯಾರು ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಬೆಳೆ ನಷ್ಟದಿಂದ ಸುಮಾರು ೧೨ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ.
ಕಾಸೀಂಸಾಬ್ ಪಿಲಿಗುಂಡ
ಮೆಣಸಿನಕಾಯಿ ಬೆಳೆ ಕಳೆದುಕೊಂಡ ರೈತ

ಕೋಟ್======

ಹೊನ್ನಕಾಟಮಳ್ಳಿಯಲ್ಲಿ ರಾಜಕೀಯ ದ್ವೇಷದಿಂದ ರೈತ ಕಾಸೀಂ ಬೆಳೆದ ಮೆಣಸಿನಕಾಯಿ ಬೆಳೆಯನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.
ಕೆ.ರಂಗಯ್ಯ
ಪಿಎಸ್‌ಐ ದೇವದುರ್ಗ

೦೨-ಡಿವಿಡಿ-೧

೦೨-ಡಿವಿಡಿ-೨