ರಾಜಕೀಯ ತುಷ್ಟೀಕರಣಕ್ಕೆ ಜಾತಿ ಸಮೀಕ್ಷೆ

ಮುಜಫರ್‍ಪುರ,ನ.೬- ಜಾತಿ ಸಮೀಕ್ಷೆ “ತುಷ್ಟೀಕರಣದ ರಾಜಕೀಯ”ದ ಭಾಗವಾಗಿದೆ. ಇದರ ಜೊತೆಗೆ ಅತ್ಯಂತ ಹಿಂದುಳಿದ ಜಾತಿಗಳ ಸಂಖ್ಯೆ “ಕಡಿಮೆ ಮಾಡುವ ಹುನ್ನಾರ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರದ ವಿರುದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಒತ್ತಡಕ್ಕೆ ಮಣಿದು ಬಿಹಾರದಲ್ಲಿ ಜಾತಿ ಸಮೀಕ್ಷೆಯಲ್ಲಿ ಯಾದವರು ಮತ್ತು ಮುಸ್ಲಿಮರ ಸಂಖ್ಯೆ ಹೆಚ್ಚಳ ಮಾಡಿ ಇತರೆ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪಟಾಹಿ ವಿಮಾನ ನಿಲ್ದಾಣದ ಮೈದಾನದಲ್ಲಿ ರಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತ ಮೈತ್ರಿಕೂಟ “ತುಷ್ಟೀಕರಣದ ರಾಜಕೀಯ” ದಲ್ಲಿ ತೊಡಗಿದೆ ಅದನ್ನು ನಿಯಂತ್ರಿಸದಿದ್ದರೆ, ಗಡಿ ಪ್ರದೇಶಗಳು “ವಿಪತ್ತು” ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬಿಹಾರ ಸರ್ಕಾರ ಜಾತಿ ಸಮೀಕ್ಷೆ ನಡೆಸುವ ನಿರ್ಧಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಾತಿವಾರು ಎಣಿಕೆಗೆ ಬಿಜೆಪಿ ಎಂಂದಿಗೂ ವಿರೋಧ ಮಾಡುವುದಿಲ್ಲ ಆದರೆ ತುಷ್ಠೀಕರಣ ನೀತಿಯನ್ನು ಬಿಜೆಪಿ ಎಂದಿಗೂ ಮಾಡುವುದಿಲ್ಲ, ಈ ಕಾರಣಕ್ಕಾಗಿಯೇ ಜಾತಿ ಗಣತಿಗೆ ವಿರೋಧವಿದೆ ಎಂದು ಅವು ತಿಳಿಸಿದ್ದಾರೆ.
ಜಾತಿ ಸಮೀಕ್ಷೆ ನಡೆಸುವ ಬಿಹಾರ ಸರ್ಕಾರದ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ. ಜಾತಿ ಸಮೀಕ್ಷೆ ನಡೆಸಿದರೆ ಎಲ್ಲಾ ಸಮುದಾಯದ ನಿಖರ ಮಾಹಿತಿ ನೀಡಬೇಕು ಅದನ್ನು ಬಿಟ್ಟು ಕೆಲ ಜಾತಿಗಳ ಸಂಖ್ಯೆ ಹೆಚ್ಚಳ ಮಾಡಿ ಮತ್ತೆ ಕೆಲ ಜಾತಿಗಳ ಸಂಖ್ಯೆ ಕಡಿಮೆ ಮಾಡುವ ಹುನ್ನಾರ ಸರಿಯಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಮುಸ್ಲಿಮರು ಮತ್ತು ಯಾದವರ ಸಂಖ್ಯೆಯನ್ನು ಹೆಚ್ಚಳ ಮಾಡುವ ಸಂಚು ನಡೆದಿದೆ/ ಲಾಲು ಪ್ರಸಾದ್ ನೇತೃತ್ವದ ಆರ್ ಜೆಡಿಯ ಪ್ರಮುಖ ಮತ ಬ್ಯಾಂಕ್ ಮತ್ತಷ್ಟು ಗಟ್ಟಿ ಮಾಡುವ ತಂತ್ರ ನಡೆದಿದೆ. ಸಮೀಕ್ಷೆಯ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇಕಡಾ ೧೭.೭ ರಷ್ಟಿದ್ದರೆ ಯಾದವರು ಶೇಕಡಾ ೧೪.೩ ರಷ್ಟಿದ್ದಾರೆ. ಸಮೀಕ್ಷೆಯ ಪ್ರಕಾರ ಇಬಿಸಿ ಸಮುದಾಯ ಜನಸಂಖ್ಯೆಯು ಶೇಕಡಾ ೩೬ ರಷ್ಟಿದೆ ಎಂದು ಹೇಳಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಒಬಿಸಿಗಳ ಹಿತಾಸಕ್ತಿ ವಿರೋಧಿಸುವ ಮಹಾಮೈತ್ರಿಕೂಟದ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ ಅವರು “ಮೋದಿ ಸಂಪುಟದಲ್ಲಿ ಒಬಿಸಿ ಸಮುದಾಯದ ೨೭ ಮಂತ್ರಿಗಳಿದ್ದಾರೆ” ಎಂದು ಅವರು ಹೇಳಿದ್ದಾರೆ.