ರಾಜಕೀಯ ಚುನಾವಣೆಗೆ ಮಾತ್ರ: ಎಂವಿವಿ

ಮಧುಗಿರಿ, ನ. ೬- ಪುರಸಭೆಗೆ ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಶಾಸಕನಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಪ.ಪಂಗಡದ ಸಮಾಜಕ್ಕಾಗಿ ಇದೇ ಮೀಸಲಾತಿಯನ್ನು ತಂದಿದ್ದೆ. ನ್ಯಾಯಾಲಯದಲ್ಲಿನ ಹೋರಾಟದಲ್ಲೂ ಇದೇ ಮೀಸಲಾತಿ ಮುಂದುವರೆದಿದ್ದು, ಈಗ ಜೆಡಿಎಸ್‌ನ ತಿಮ್ಮರಾಯಪ್ಪ ಕಾಂಗ್ರೆಸ್ ಪಕ್ಷದ ಸದಸ್ಯರ ಸಹಕಾರದಿಂದಲೂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.
ಪಟ್ಟಣದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಇತರೆ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುವಂತೆ ನೂತನ ಅಧ್ಯಕ್ಷರಿಗೆ ಸೂಚಿಸಿದ್ದೇನೆ. ಈಗಾಗಲೇ ಕುಮಾರಸ್ವಾಮಿ ಸರ್ಕಾರದಲ್ಲಿ ೫.೬ ಕೋಟಿ ಅನುದಾನ ತಂದಿದ್ದು, ಹೆಚ್ಚುವರಿಯಾಗಿ ೩ ಕೋಟಿ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಅದನ್ನು ತಡೆದಿದೆ. ಆದರೂ ಈ ಅನುದಾನವನ್ನು ಮತ್ತೆ ತಂದು ಪಟ್ಟಣದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ.ಆರ್. ಜಗನ್ನಾಥ್, ಜೆಡಿಎಸ್ ನಗರಾಧ್ಯಕ್ಷ ಹಾಗೂ ಸದಸ್ಯರಾದ ಎಂ.ಎಸ್. ಚಂದ್ರಶೇಖರಬಾಬು, ನರಸಿಂಹಮೂರ್ತಿ, ನಾರಾಯಣ್, ಎಂ.ಎಲ್.ಗಂಗರಾಜು, ಲಾಲಪೇಟೆ ಮಂಜುನಾಥ್, ಮಂಜುನಾಥಾಚಾರ್, ಅಲೀಂ, ಎಂ.ಎಸ್.ಚಂದ್ರಶೇಖರ್, ರಾಧಿಕಾ ಆನಂದಕೃಷ್ಣ, ಎಂ.ವಿ.ಗೋವಿಂದರಾಜು, ನಟರಾಜು, ಸುಜಾತ ಶಂಕರನಾರಾಯಣ್, ಮುಖ್ಯಾಧಿಕಾರಿ ಅಮರನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.