ರಾಜಕೀಯವಾಗಿ ಮುಗಿಸಲು ಷಡ್ಯಂತ್ರ

ಬೆಂಗಳೂರು,ಏ.೨೧:ರಾಜಕೀಯದಿಂದ ನನ್ನನ್ನು ಮುಗಿಸಲು ಬಿಜೆಪಿಯವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ರಾಜಕೀಯದಿಂದಲೇ ಮುಗಿಸಬೇಕು ಎಂದು ಷಡ್ಯಂತ್ರ ನಡೆದಿದೆ. ಕನಕಪುರದಲ್ಲಿ ತಮ್ಮ ವಿರುದ್ಧ ಷಡ್ಯಂತ್ರ, ಕುತಂತ್ರ ಎಲ್ಲವೂ ನಡೆಯುತ್ತಿದೆ. ಬಿಜೆಪಿ ನಾಯಕರು ಏನೂ ಬೇಕಾದರು ಮಾಡಿಕೊಳ್ಳಲಿ ಎಂದರು.
ನನಗೆ ಬೇಕಾದಷ್ಟು ಅಧಿಕಾರಿಗಳು, ಮಾಧ್ಯಮ ಸ್ನೇಹಿತರು ಇದ್ದು, ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅದಕ್ಕಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದೇವೆ. ಕನಕಪುರದಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದನ್ನು ಕಾಲವೇ ತೀರ್ಮಾನಿಸುತ್ತದೆ ಎಂದರು.
ನಾನು ಕಳೆದ ೧೫ ವರ್ಷಗಳಲ್ಲಿ ಒಂದು ಮನೆ ಬಿಟ್ಟರೆ ಹೊಸದಾಗಿ ಯಾವುದೇ ಆಸ್ತಿ ಖರೀದಿ ಮಾಡಿಲ್ಲ. ಆದರೂ ಷಡ್ಯಂತ್ರ ನಡೆದಿದೆ. ರಾಜಕೀಯದಿಂದ ನನ್ನನ್ನು ಏನಾದರು ಮಾಡಿ ಮುಗಿಸಲು ಪ್ರಯತ್ನಗಳು ನಡೆದಿವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಇವರನ್ನೇ ಬಿಟ್ಟಿಲ್ಲ. ನನ್ನನ್ನು ಬಿಡುತ್ತಾರಾ, ಇವನು ಇರುವುದಕ್ಕೆ ತಾನೆ ಕಾಂಗ್ರೆಸ್ ಗಟ್ಟಿಯಾಗುತ್ತಿದೆ ಎಂದು ಇಷ್ಟೆಲ್ಲ ಷಡ್ಯಂತ್ರಗಳು ನಡೆದಿವೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಯಡಿಯೂರಪ್ಪರವರ ಸರ್ಕಾರ ಇದ್ದಾಗ ಬೇರೆಯವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐಗೆ ನೀಡದೆ ಕೇವಲ ನನ್ನ ಪ್ರಕರಣ ಮಾತ್ರ ನೀಡಿದ್ದಾರೆ. ದೆಹಲಿಯವರ ಒತ್ತಡದಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ. ರಾಜಕೀಯದಿಂದಲೇ ನನ್ನನ್ನು ತೆಗೆಯುವ ಷಡ್ಯಂತ್ರ ನಡೆದಿದೆ ಎಂದರು.