ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಸಿದ್ಧತೆ

ಬೆಂಗಳೂರು, ನ.೨೫- ಬಿಬಿಎಂಪಿ ವ್ಯಾಪ್ತಿಯಲ್ಲಿ ೩೨೬ ಎಕರೆಯಷ್ಟು ರಾಜಕಾಲುವೆ ಒತ್ತುವರಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಬೃಹತ್ ತೆರವು ಕಾರ್ಯಾಚರಣೆಗೆ ಪಾಲಿಕೆ ಅಧಿಕಾರಿಗಳು ಸಜ್ಜುಗೊಂಡಿದ್ದಾರೆ.

ಒತ್ತುವರಿ ಪ್ರದೇಶದಲ್ಲಿ ೩೫೬ ವಾಸದ ಮನೆಗಳು, ೩೫ ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಒಟ್ಟು ೧೫೭೦ ಒತ್ತುವರಿಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಒತ್ತುವರಿ ತೆರವುಗೊಳ್ಳಲಿದೆ.

ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ನಗರದಲ್ಲಿ ಸಂಭವಿಸಿದ್ದ ಸಾಕಷ್ಟು ಅನಾಹುತಗಳಿಗೆ ರಾಜಕಾಲುವೆ ಒತ್ತುವರಿಯೇ ಕಾರಣ ಎಂಬುದು ಪತ್ತೆಯಾಗಿದೆ. ಹೀಗಾಗಿ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಹಾಗಾಗಿ, ರಾಜಕಾಲುವೆ ಒತ್ತುವರಿ ಪಟ್ಟಿಯನ್ನು ಸಿದ್ಧಪಡಿಸಿರುವ ಬಿಬಿಎಂಪಿ ಅಕಾರಿಗಳು ಶೀಘ್ರದಲ್ಲೇ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.

ಇನ್ನೂ, ೧೩೯ ಗ್ರಾಮಗಳಲ್ಲಿ ೩೨೬.೧೬ ಎಕರೆಯಷ್ಟು ರಾಜಕಾಲುವೆ ಒತ್ತುವರಿಯಾಗಿದ್ದು, ಒಟ್ಟು ೧೫೭೦ ಒತ್ತುವರಿಯನ್ನು ಗುರುತಿಸಲಾಗಿದೆ. ಇದರಲ್ಲಿ ೩೫೬ ವಾಸದ ಮನೆಗಳು, ೩೫ ವಾಣಿಜ್ಯ ಸಂಕಿರ್ಣಗಳು, ೯೩೫ ಕೃಷಿ ಪ್ರದೇಶಗಳು ಹಾಗೂ ೨೪೪ ರಸ್ತೆಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಪಟ್ಟಿ ಸಿದ್ಧವಾಗಿದೆ.

ಪ್ರಮುಖವಾಗಿ ಪೂರ್ವ ವಲಯದ ೧೦ ಗ್ರಾಮಗಳಲ್ಲಿ ೩೮ ಎಕರೆ ಒತ್ತುವರಿಯಾಗಿದ್ದು, ೮೯ ವಾಸದ ಮನೆಗಳು, ಒಂದು ವಾಣಿಜ್ಯ ಕಟ್ಟಡ, ೧೦ ಕೃಷಿ ಜಾಗ ಹಾಗೂ ಐದು ರಸ್ತೆಗಳು ರಾಜಕಾಲುವೆ ಒತ್ತುವರಿ ಮಾಡಿವೆ.
ಪಶ್ಚಿಮ ವಲಯದ ಏಳು ಗ್ರಾಮಗಳಲ್ಲಿ ೨೨ ಎಕರೆ ಒತ್ತುವರಿಯಾಗಿದ್ದು, ೩೬ ವಾಸದ ಮನೆಗಳು ಹಾಗೂ ೧೬ ರಸ್ತೆಗಳನ್ನು ಪತ್ತೆಹಚ್ಚಲಾಗಿದೆ.

ಯಲಹಂಕದ ೩೦ ಗ್ರಾಮಗಳಲ್ಲಿ ಬರೋಬ್ಬರಿ ೪೬ ಎಕರೆ ಒತ್ತುವರಿಯಾಗಿದ್ದು, ೩೬ ವಾಸದ ಮನೆಗಳು, ೨೪೮ ಕೃಷಿ ಪ್ರದೇಶಗಳು ಹಾಗೂ ೩೯ ರಸ್ತೆಗಳನ್ನು ಪತ್ತೆಹಚ್ಚಲಾಗಿದೆ.
ಮಹದೇವಪುರದ ೫೩ ಗ್ರಾಮಗಳಲ್ಲಿ ೧೭೦ ಎಕರೆಗೂ ಹೆಚ್ಚು ಒತ್ತುವರಿಯಾಗಿದ್ದು, ೫೦ ವಾಸದ ಮನೆಗಳು, ಎರಡು ವಾಣಿಜ್ಯ ಸಂಕೀರ್ಣಗಳು, ೫೭೩ ಕೃಷಿ ಜಾಗಗಳು ಹಾಗೂ ೧೩೬ ರಸ್ತೆಗಳಿವೆ.

ಬೊಮ್ಮನಹಳ್ಳಿಯ ೨೦ ಗ್ರಾಮಗಳಲ್ಲಿ ೧೮.೨೩ ಎಕರೆ ಒತ್ತುವರಿಯಲ್ಲಿ ೮೭ ವಾಸದ ಮನೆಗಳು, ೧೧ ವಾಣಿಜ್ಯ ಸಂಕೀರ್ಣಗಳು, ಏಳು ಕೃಷಿ ಪ್ರದೇಶಗಳು ಹಾಗೂ ೨೩ ರಸ್ತೆಗಳನ್ನು ನಿರ್ಮಿಸಲಾಗಿದೆ.
ಆರಾರ್ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ೧೫ ವಾಸದ ಮನೆ, ಒಂದು ವಾಣಿಜ್ಯ ಸಂಕೀರ್ಣ, ೪ ಕೃಷಿ ಪ್ರದೇಶಗಳನ್ನು ನಿರ್ಮಿಸಲಾಗಿದೆ.

ಅದೇ ರೀತಿ, ದಕ್ಷಿಣ ವಲಯದ ಎರಡು ಗ್ರಾಮಗಳಲ್ಲಿ ೧.೨೦ ಎಕರೆ ಒತ್ತುವರಿಯಾಗಿದ್ದು, ನಾಲ್ಕು ವಾಸದ ಮನೆಗಳು, ಎರಡು ರಸ್ತೆಗಳಿವೆ.
ಕೋರಮಂಗಲ ಕಣಿವೆಯ ಮೂರು ಗ್ರಾಮಗಳಲ್ಲಿ ೫.೨೦ ಎಕರೆ ಒತ್ತುವರಿಯಾಗಿದ್ದು, ೯ ವಾಣಿಜ್ಯ ಕಟ್ಟಡಗಳು, ಒಂದು ಕೃಷಿ ಪ್ರದೇಶವನ್ನು ಗುರುತಿಸಲಾಗಿದೆ.

ಅದೇ ರೀತಿ ದಾಸರಹಳ್ಳಿಯ ೧೩ ಗ್ರಾಮಗಳಲ್ಲಿ ೨೩ ಎಕರೆಯನ್ನು ಒತ್ತುವರಿ ಮಾಡಿ ೩೯ ವಾಸದ ಮನೆ, ೧೧ ವಾಣಿಜ್ಯ ಸಂಕೀರ್ಣ, ೯೨ ಕೃಷಿ ಪ್ರದೇಶ ಹಾಗೂ ೨೩ ರಸ್ತೆಗಳನ್ನು ನಿರ್ಮಿಸಲಾಗಿದೆ.
ಒಟ್ಟಾರೆ ನಗರದ ೧೩೯ ಗ್ರಾಮಗಳಲ್ಲಿ ೩೨೬.೧೬ ಎಕರೆ ಒತ್ತುವರಿ ಮಾಡಿದ್ದು, ಒಟ್ಟು ೧೫೭೦ ಒತ್ತುವರಿಯನ್ನು ಗುರುತಿಸಲಾಗಿದ್ದು, ಈ ಎಲ್ಲ ಒತ್ತುವರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಲು ಬಿಬಿಎಂಪಿ ನಿರ್ಧರಿಸಿದೆ.