ರಾಜಕಾಲುವೆಗಳ ಸ್ವಚ್ಛಕ್ಕೆ ಒತ್ತಾಯ

ಕೋಲಾರ,ಜೂ.೨೦- ನಗರದಲ್ಲಿನ ಅಮಾನಿಕೆರೆ ಮೂಲದ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮ ವಹಿಸುವಂತೆ ನಗರಸಭೆ ಸದಸ್ಯರು ನಗರಸಭೆ ಆಯುಕ್ತರಾದ ಶಿವಾನಂದ ಅವರಿಗೆ ಮನವಿ ಸಲ್ಲಿಸಿದರು.
ಕೋಲಾರ ನಗರ ವ್ಯಾಪ್ತಿಯ ರಹಮತ್ ನಗರ, ನೂರ್‌ನಗರ, ಶಾಂತಿನಗರ, ಪೂಲ್‌ಷಾ ಮೊಹಲ್ಲಾದಿಂದ ಹಾಗೂ ನಗರದ ಅಮಾನಿಕೆರೆ ಸೇರುವ ರಾಜಕಾಲುವೆ ಹಾಗೂ ಅಂತರಗಂಗೆ ರಸ್ತೆಯ ರಸ್ತೆಯ ಕುವೆಂಪು ಪಾರ್ಕ್ ಪಕ್ಕ ರಾಜಕಾಲುವೆ ಸೇರಿದಂತೆ ಅಜಾದ್‌ನಗರ ಕಾಲುವೆಗಳನ್ನು ತುರ್ತಾಗಿ ಸ್ವಚ್ಚಗೊಳಿಸಲು ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಮಳೆಗಾಲ ಪ್ರಾರಂಭವಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ ಶಾಂತಿನಗರ ಹಾಗೂ ರಹಮತ್ ನಗರದಲ್ಲಿ ಬಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿ ಅನಾಹುತಗಳಾಗಿದ್ದು, ಅಂತಹ ಪರಿಸ್ಥಿತಿ ಉದ್ಭವಿಸುವ ಮೊದಲೇ ತಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಾವುದೇ ಅನಾಹುತಗಳು ಸಂಭವಿಸದಂತೆ ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ನಗರಸಭಾ ಸದಸ್ಯರಾದ ೩೧ನೇ ವಾರ್ಡ್‌ನ ಅಪ್ಸರ್‌ಪಾಷ, ೩೪ನೇ ವಾರ್ಡ್‌ನ ಶಫೀ, ೨೨ನೇ ವಾರ್ಡ್‌ನ ರಫೀ, ೩೨ನೇ ವಾರ್ಡ್‌ನ ಏಜಾಜ್, ೩೫ನೇ ವಾರ್ಡ್‌ನ ಏಜಾಜ್, ೨೪ನೇ ವಾರ್ಡ್‌ನ ಮಂಜು ಇನ್ನಿತರರು ಉಪಸ್ಥಿತರಿದ್ದರು.