ರಾಜಕಾರಣಿಗಳ ಆಸೆ-ಆಮಿಷಗಳಿಗೆ ಬಲಿಯಾಗದಿರಿ

ಕೆ.ಆರ್.ಪೇಟೆ:ಜ:26: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಭದ್ರ ಸರ್ಕಾರದ ಹಣೆಬರಹವನ್ನೇ ನಿರ್ಧರಿಸುವ ಮತದಾನ ಸಂವಿಧಾನವು ನಮಗೆ ಕೊಟ್ಟಿರುವ ವರವಾಗಿದೆ. ಆದ್ದರಿಂದ ಯುವಜನರು ಆಸೆ ಆಮಿಷಗಳಿಗೆ ಒಳಗಾಗದೇ ಯೋಗ್ಯರನ್ನು ಗುರುತಿಸಿ ಆಲೋಚಿಸಿ ಮತದಾನ ಮಾಡಬೇಕು ಎಂದು ಜೆಎಂಎಫ್‍ಸಿ ಸಿವಿಲ್ ನ್ಯಾಯಾಲಯದ ಅಪರ ನ್ಯಾಯಾಧೀಶರಾದ ಬಸವರಾಜಪ್ಪ ತುಳಸಪ್ಪನಾಯಕ ಕರೆ ನೀಡಿದರು.
ಅವರು ಇಂದು ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡಿದರು.
ಭ್ರಷ್ಠರು ಹಾಗೂ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದು ಲೂಟಿ ಮಾಡುವವರು ಆಯ್ಕೆಯಾದರೆ ಜನಸಾಮಾನ್ಯರಿಗೆ ಉಳಿಗಾಲವಿಲ್ಲದಂತಾಗಿ ಸತತವಾಗಿ 5 ವರ್ಷಗಳ ಕಾಲ ನರಳ ಬೇಕಾಗುತ್ತದೆ. ಆದ್ದರಿಂದ ಯುವಜನರು ವಿಶೇಷವಾಗಿ ಹೊಸದಾಗಿ ಮತದಾರರಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವವರು ರಾಜಕಾರಣಿಗಳು ಒಡ್ಡುವ ಆಸೆ-ಆಮಿಷಗಳಿಗೆ ಬಲಿಯಾಗಿ ಅಮೂಲ್ಯವಾದ, ಬೆಲೆಕಟ್ಟಲಾಗದ ಮತವನ್ನು ಮಾರಿಕೊಳ್ಳದೇ ಯೋಗ್ಯರನ್ನು ಗುರುತಿಸಿ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ.ಶಿವಮೂರ್ತಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡಿ ಜನರು ಜಾಗೃತರಾಗುವವರೆಗೂ ಪ್ರಜಾಪ್ರಭುತ್ವ ವ್ಯವಸ್ಥೆಯು ಬಲಿಷ್ಠವಾಗುವುದಿಲ್ಲ. ಜಾತಿ, ಮತ, ಪಂಥಗಳಿಂದ ಹೊರಬಂದು ಸಮಾಜಮುಖಿ ಕಾಳಜಿಯನ್ನು ಹೊಂದಿರುವ ಯೋಗ್ಯರನ್ನು ಗುರುತಿಸಿ ಮತ ಚಲಾಯಿಸುವ ಮೂಲಕ ಮತದಾನ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯಬೇಕು. ಹಣ-ಹೆಂಡವನ್ನು ಚೆಲ್ಲಿ ಜನಪ್ರತಿನಿಧಿಗಳಾಗಲು ಸಂಚು ನಡೆಸುವ ದುಷ್ಠರನ್ನು ಸೋಲಿಸಿ ಮನೆಗೆ ಕಳಿಸಬೇಕು. ಹಣಕ್ಕೆ ಬೆಲೆ ನೀಡದೇ ಜನಪರವಾದ ಕಾಳಜಿ ಹಾಗೂ ಬದ್ಧತೆಯನ್ನು ಹೊಂದಿರುವವರನ್ನು ಗುರುತಿಸಿ ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳ ಈಡೇರಿಕೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಖಜಾಂಚಿ ಬಿ.ಕೆ.ಯೋಗೇಶ್ ಕಾರ್ಯಕ್ರಮದಲ್ಲಿ ಮಾತನಾಡಿ ಅರಿವಿನ ಜಾಗೃತಿಯನ್ನು ಮೂಡಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು ಮತದಾನ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ,ಎನ್.ಚಂದ್ರಮೌಳಿ, ಪುರಸಭೆ ಮುಖ್ಯಾಧಿಕಾರಿ ಸತೀಶ್‍ಕುಮಾರ್, ಸಿಡಿಪಿಓ ದೇವಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಸರ್ಕಾರಿ ಸಹಾಯಕ ಅಭಿಯೋಜಕರಾದ ಬಿ.ಸಿ.ರಾಜೇಶ್, ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್.ಇಂದ್ರಕುಮಾರ್, ಜಂಟಿ ಕಾರ್ಯದರ್ಶಿ ಎಂ.ಎನ್.ಅನ್ವೇಶ್,ಸೇರಿದಂತೆ ಹಲವರು ಉಪಸ್ಥಿತರಿದ್ದರು.