ರಾಜಕಾರಣಿಗಳಿಗೆ ನೈತಿಕತೆ ಮುಖ್ಯ: ಸಚಿವ ಜೋಶಿ

ಹುಬ್ಬಳ್ಳಿ, ಮಾ 27: ರಾಜಕಾರಣಿಗಳಿಗೆ ನೈತಿಕತೆ ಮುಖ್ಯ. ಭಾರತೀಯ ರಾಜಕಾರಣಿಗಳಿಗೆ ವಿಶೇಷ ಗೌರವವಿದೆ. ನಮ್ಮನ್ನು ಅನುಕರಣೆ ಮಾಡುವ ಜನ ಇರುತ್ತಾರೆ. ನಾವು ಸದಾ ಗೌರವದಿಂದ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಬದುಕಿನಲ್ಲಿದ್ದವರು ಗೌರವಯುತವಾಗಿ ಇರಬೇಕು. ಈ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ ಎಂದು ಚುಟುಕಾಗಿ ನುಡಿದರು.
ಆರೋಗ್ಯ ಸಚಿವ ಸುಧಾಕರ್ ಅವರ ಏಕಪತ್ನಿ ವೃತಸ್ಥ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸುಧಾಕರ್ ಹೇಳಿಕೆ ಸರಿಯಲ್ಲ. ಅವರು ಆ ರೀತಿ ಹೇಳಿಕೆ ಕೊಡಬಾರದಿತ್ತು. ಬೇರೆಯವರನ್ನು ನೋಡಿ ನಾವು ಅನುಸರಿಸುವುದಲ್ಲ. ನಮಗೆ ನಾವು ಸರಿಯಾಗಿ ಇರಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಚಿವ ದಿ. ಸುರೇಶ ಅಂಗಡಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನ ಪರಿಗಣಿಸುತ್ತಾರೆ ಎಂದು ಸಚಿವ ಜೋಶಿ ನುಡಿದರು.