ಕೋಲಾರ,ಸೆ.೨೨-ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸುಮಾರು ೧೫೦ ಕೋಟಿಗೂ ಅಧಿಕ ಬೆಲೆ ಬಾಳುವ ೮೦ ಎಕರೆ ಸರ್ಕಾರಿ ಜಮೀನನ್ನು ಭೂ ಮಂಜೂರಾತಿ ಮಾಡಿರುವ ಅಧಿಕಾರಿಗಳ ಅಕ್ರಮಗಳು ಸಾಬೀತಾಗಿದ್ದರೂ ಅವರುಗಳ ಮೇಲೆ ಮೇಲಿನ ಅಧಿಕಾರಿಗಳು ಹಾಗೂ ಸರ್ಕಾರ ಕಾನೂನು ಕ್ರಮ ಕೈ ಗೊಳ್ಳದಿರುವುದು ಖಂಡನೀಯವೆಂದು ಸಾಮಾಜಿಕ ಕಾರ್ಯಕರ್ತ ಚಂಚಿಮಲೆ ಮುನೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಮಾಲೂರಿನ ಶಾಸಕ ಕೆ.ವೈ.ನಂಜೇಗೌಡ ಸೇರಿದಂತೆ ಆರ್.ಐ,ವಿ.ಎ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಸೇರಿದಂತೆ ೧೮ ಜನ ಕಂದಾಯ ಅಧಿಕಾರಿಗಳ ಮೇಲೆ ಕಳೆದ ಎರಡು ವರ್ಷಗಳ ಹಿಂದೆ ಕ್ರಿಮಿನಲ್ ದೂರು ದಾಖಲಾಗಿದ್ದರೂ ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಪೋಲಿಸ್ ಇಲಾಖೆ ದೋಷಾರೋಪ ಪಟ್ಟಿ ಸಲ್ಲಿಸದೆ ವಿಳಂಬ ಮಾಡುತ್ತಿದೆಯೆಂದು ಆರೋಪಿಸಿದರು.
ಖುದ್ದು ಅಸಿಸ್ಟೆಂಟ್ ಕಮೀಷನರ್ ರವರೇ ತನಿಖೆ ನಡೆಸಿ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಆರೋಪ ಹೊತ್ತಿರುವವರ ಮೇಲೆ ದೂರು ದಾಖಲಾಗಿದ್ದರೂ ಪ್ರಕರಣವನ್ನು ಮುಚ್ಚಿಹಾಕು ಉದ್ದೇಶದಿಂದ ವರ್ಗಾವಣೆ ಆಗಿದ್ದ ಅಂದಿನ ಆರ್.ಐ.ಶ್ರೀಪತಿ ರವರನ್ನು ಶಾಸಕ ನಂಜೇಗೌಡರು ತಮ್ಮ ಅಧಿಕಾರ ಭೂಗಳ್ಳರಿಗೆ ಸಹಕಾರ ನೀಡಿದ ಅಧಿಕಾರಿಗಳಿಗೆ, ದುರುಪಯೋಗ ಪಡಿಸಿಕೊಂಡು ಆರೋಪಿಯಾಗಿರುವ ಆರ್.ಐ ಶ್ರೀಪತಿ ಎಂಬ ಅಧಿಕಾರಿಯನ್ನು ಮಾಲೂರು ತಾಲ್ಲೂಕಿನ ಅದೇ ಸ್ಥಾನಕ್ಕೆ ವರ್ಗ ಮಾಡಿಸಿಕೊಂಡಿದ್ದಾರೆಂದು ದೂರಿದರು.
ಅಂದಿನ ಮಾಲೂರು ತಹಸೀಲ್ದಾರ್ ರವರು ಮಾತ್ರ ಅಮಾನತ್ತು ಗೊಂಡಿದ್ದು ಇತರ ಆರೋಪಿಗಳಿಗೆ ಯಾವುದೇ ಶಿಸ್ತು ಕ್ರಮ ಕೈ ಗೊಂಡಿರುವುದಿಲ್ಲ ಈ ಎಲ್ಲಾ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ,ಕಂದಾಯ ಮಂತ್ರಿಗಳಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ದೂರು ಸಲ್ಲಿಸಿದ್ದರೂ ಇದುವರೆವಿಗೂ ಯಾವುದೇ ಕಾನೂನಾತ್ಮಕ ಕ್ರಮ ಕಗೊಂಡಿಲ್ಲದಿರುವುದು ಬೇಸರದ ಸಂಗತಿಯಾಗಿದೆಯೆಂದು ಹೇಳಿದರು.
ದರೋಡೆ ಮಾಡಿರುವ ಭೂಗಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಲು ಜಿಲ್ಲಾಧಿಕಾರಿ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಮುಂದಾಗ ಬೇಕೆಂದು ಒತ್ತಾಯಿಸಿದ ಅವರು ಒಂದು ವೇಳೆ ನಮ್ಮ ಹೋರಾಟಕ್ಕೆ ಫಲ ಸಿಗದಿದ್ದರೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.
.