ರಾಜಕಾರಣದ ಉದ್ದೇಶ ಲೋಕಕಲ್ಯಾಣವಾಗಿರಲಿ; ಮುರುಘಾ ಶ್ರೀ

ಚಿತ್ರದುರ್ಗ ಸೆ. 7- ಸಮಾಜದಲ್ಲಿ ನಿದ್ರೆಗೆಡಿಸುವ ಸಂಗತಿ ಎಂದರೆ ಮೀಸಲಾತಿ. ಧಾರ್ಮಿಕರು ರಾಜಕಾರಣ ಮತ್ತು ಧರ್ಮದ ನಡುವೆ ಅಂತರ ಕಾಪಾಡಿಕೊಳ್ಳಬೇಕು. ಮಠಾಧೀಶರು ಪಕ್ಷಾತೀತ ಮತ್ತು ಜಾತ್ಯತೀತ ನಡೆಗೆ ಒಳಗಾದಾಗ ಮಾತ್ರ ಬಸವಣ್ಣ ಕಟ್ಟಿದ ಕಲ್ಯಾಣ ರಾಜ್ಯವನ್ನು ನನಸು ಮಾಡಲು ಸಾಧ್ಯ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಸವಮಂಟಪ ಬಳಿಯ ವಾಸಿ ಎಸ್. ಷಣ್ಮುಖಪ್ಪ ಅವರ ಮನೆಯಂಗಳದಲ್ಲಿ ನಡೆದ ನಿತ್ಯ ಕಲ್ಯಾಣ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಠಾಧೀಶರು ರಾಜಕಾರಣ ಮಾಡಬಾರದೆ? ನಿಮ್ಮ ಅನಿಸಿಕೆ ಏನು? ವಿಷಯ ಚಿಂತನ ಮಾಡಿದ ಶ್ರೀಗಳು, ಸಮಯಪ್ರಜ್ಞೆ, ಸಮೂಹಪ್ರಜ್ಞೆ, ಧಾರ್ಮಿಕ ಪ್ರಜ್ಞೆಯೊಂದಿಗೆ ರಾಜಕೀಯ ಪ್ರಜ್ಞೆಯೂ ಸಹ ಜಾಗೃತವಾಗಬೇಕು. ಜನರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ತಪ್ಪಲ್ಲ. ಮತಾಧಿಕಾರ ಪ್ರಜೆಗಳಿಗಿರುವ ಪರಮಾಧಿಕಾರ. ಉತ್ತಮ ಸರಕಾರ ಬಯಸುವವರು ಮನೆಯಲ್ಲಿ ಇರಬಾರದು. ಮನೆಯಿಂದ ಮತಗಟ್ಟೆಗೆ ಹೋಗಿ ಮತದ ಅಧಿಕಾರ ಚಲಾಯಿಸಬೇಕು ಎಂದರು.ರಾಜಕಾರಣದ ಉದ್ದೇಶ ಲೋಕಕಲ್ಯಾಣ, ಜನ ಕಲ್ಯಾಣ. ರಾಜಕಾರಣ ಜನಕಲ್ಯಾಣ ಮಾಡುವ ನಿಟ್ಟಿನಲ್ಲಿ ಸಾಗಿದೆಯೇ ಎಂಬುದು ಪ್ರಶ್ನೆ. ಬಸವಣ್ಣನವರೂ ಒಬ್ಬ ರಾಜಕಾರಣಿ. ಅರ್ಥಸಚಿವರಾಗಿ ಕಲ್ಯಾಣರಾಜ್ಯ ಕಟ್ಟಿದರು. ಸಂತರು, ಶರಣರು, ಸಮಾಜ ಸುಧಾರಕರು ಅವರನ್ನು ಗೌರವಿಸುತ್ತಾರೆ. ಬಸವಣ್ಣನವರಿಗೆ ಅಧಿಕಾರ ಇತ್ತು. ಅದನ್ನು ಲೋಕಕಲ್ಯಾಣಕ್ಕಾಗಿ ಬಳಸಿಕೊಂಡರು. ಬಸವಪೂರ್ವ ಯುಗದಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳಿದ್ದವು. ಬಸವಣ್ಣನವರ ನೇತೃತ್ವದಲ್ಲಿ ಕ್ರಾಂತಿ, ಜಾಗೃತಿ ಆಯಿತು. ವಚನ ಚಳವಳಿಯ ಬಗ್ಗೆ ಅನೇಕ ರಾಜಕಾರಣಿಗಳಿಗೆ ಅರಿವು ಇಲ್ಲ. ಇತಿಹಾಸವನ್ನು ಓದಬೇಕು. ಜನಕಲ್ಯಾಣವನ್ನು ಮರೆತ ರಾಜಕಾರಣ ಕಾಲಹರಣ ಮಾಡುತ್ತಿದೆ. ರಾಷ್ಟçದಲ್ಲಿ ಜ್ವಲಂತ ಸಮಸ್ಯೆಗಳಿವೆ. ನಿರುದ್ಯೋಗ, ನೀರಾವರಿ, ಜನಸಂಖ್ಯೆ ಹೀಗೆ ಅನೇಕ ಇವೆ. ಕಾಲಹರಣ ಮಾತ್ರವಲ್ಲ ಶಕ್ತಿಯ ಹರಣ. ರಾಜಕಾರಣ ಅಂದರೆ ಹಗರಣವಾಗಿದೆ. ಬಸವಾದಿ ಶರಣರು ರಾಜಕಾರಣವನ್ನು ಜನಮುಖಿ ಕಾರ್ಯಗಳಿಗೆ ಬಳಸಿದರು ಎಂದರು.

ಜನರು ಹಗರಣ ರಹಿತ ರಾಜಕಾರಣ ಬಯಸುತ್ತಿದ್ದಾರೆ. ರಾಜಕಾರಣ ಪ್ರವೃತ್ತಿಯಾಗಿಲ್ಲ. ಅದೊಂದು ದಂಧೆಯಾಗಿದೆ. ಹಣ ಮಾಡುವವರು ಅಕ್ರಮದ ಹಾದಿ ಅನುಸರಿಸುತ್ತಾರೆ. ಜಾತಿ ಆಧಾರಿತ ರಾಜಕಾರಣ, ಮತ ಆಧಾರಿತ ರಾಜಕಾರಣ ಕೆಲಸ ಮಾಡುತ್ತಿದೆ. ಜಾತಿ, ಧರ್ಮ, ಹಣ ಮತ್ತು ಮದ್ಯದ ರಾಜಕಾರಣ ನಡೆಯುತ್ತಿದೆ. ರಾಜಕಾರಣದಲ್ಲಿ ಅನಾರೋಗ್ಯದ ವಾತಾವರಣ ಸೃಷ್ಟಿಸಿಯಾಗಿ ಅಸ್ಥಿರತೆ, ಅರಾಜಕತೆ, ಅಪ್ರಬುದ್ಧತೆ ಕೆಲಸ ಮಾಡುತ್ತಿದೆ. ಜನಪ್ರತಿನಿಧಿಗಳು ಪ್ರಬುದ್ಧರಾಗಿ ಚಿಂತನೆ ಮಾಡಬೇಕಿದೆ. ಬಾಬಾ ಸಾಹೇಬ ಅಂಬೇಡ್ಕರ್‌ರಂತೆ ರಾಜಕಾರಣ ಮಾಡಲಿ. ಅಸಮಾನತೆ, ಅಸ್ಪಶ್ಯತೆ, ಲಿಂಗ ತಾರತಮ್ಯ ಹೋಗಲಾಡಿಸಲು ಬಸವಣ್ಣ ಚಿಂತನೆ ಮಾಡಿದರು ಎಂದು ಹೇಳಿದರು.ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿದರು. ಕಾರ್ಯಕ್ರಮದ ದಾಸೋಹಿಗಳಾದ ಕೆಇಬಿ ಷಣ್ಮುಖಪ್ಪ, ವಕೀಲರಾದ ಉಮೇಶ್ ವೇದಿಕೆಯಲ್ಲಿದ್ದರು. ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್ ಮೊದಲಾದವರು ಭಾಗವಹಿಸಿದ್ದರು.