ರಾಜಕಾರಣದಿಂದ ದೂರ ಉಳಿಯುವುದಾಗಿ ಬಿಎಸ್‌ವೈ ಹೇಳಿಲ್ಲ

ಬೆಂಗಳೂರು, ಜು.೨೪- ಶಿಕಾರಿಪುರದಿಂದ ತಮ್ಮ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಯಡಿಯೂರಪ್ಪ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಹೇಳಿಲ್ಲ. ಇಲ್ಲಿ ಯಾವುದೇ ಗೊಂದಲ ಬೇಡ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲಲ್ಲ ಎಂದಿದ್ದಾರಷ್ಟೆ. ಸಕ್ರಿಯ ರಾಜಕಾರಣದಿಂದ ದೂರ ಹೋಗುತ್ತೇನೆ ಎಂದು ಹೇಳಿಲ್ಲ. ಅವರು ಜನಾಕರ್ಷಣೆಯ ನಾಯಕ. ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ಬಿಜೆಪಿ ಕಟ್ಟಿದ್ದರಲ್ಲಿ ಅವರೂ ಒಬ್ಬರು ಎಂದರು.
ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಸಂಸದೀಯ ಮಂಡಳಿ ತೀರ್ಮಾನ ಮಾಡುತ್ತೆ. ಪ್ರಧಾನಿಗೂ ಟಿಕೆಟ್ ಅಂತಿಮ ಮಾಡೋದು ಸಂಸದೀಯ ಮಂಡಳಿ. ಈ ವ್ಯವಸ್ಥೆ ಹೇಗಿದೆ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿದೆ ಎಂದರು.
ಸಂಪುಟಕ್ಕೆ ಸೇರಲು ಪೈಪೋಟಿ ಇದೆ. ಮುಖ್ಯಮಂತ್ರಿಗಳು ಇಂದು ದೆಹಲಿಗೆ ತೆರಳಿದ್ದಾರೆ. ವರಿಷ್ಠರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದರು.
ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಅದು ಸಿಗಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಸಿ.ಟಿ ರವಿ ಹೇಳಿದರು.
ಸೋನಿಯಾಗಾಂಧಿ ಅವರ ಇಡಿ ತನಿಖೆಯನ್ನು ವಿರೋಧಿಸಿ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ. ಡಿ.ಕೆ ಶಿವಕುಮಾರ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಇನ್ನೂ ಕೆಲ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗುವ ದಾರಿಯಲ್ಲಿದ್ದಾರೆ. ಇವರದ್ದು ದೇಶಭಕ್ತಿಯಲ್ಲ, ಸೋನಿಯಾಭಕ್ತಿ, ಭ್ರಷ್ಟಾಚಾರ ಭಕ್ತಿ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರ ಭ್ರಷ್ಟಾಚಾರದ ಬಗ್ಗೆ ಶಾಸಕ ರಮೇಶ್‌ಕುಮಾರ್ ಸತ್ಯ ಹೇಳಿದ್ದಾರೆ. ನಾವು ತಿಂದಿದ್ದೇವೆ. ಅದನ್ನು ಒಪ್ಪಿಸುತ್ತೇವೆ ಎಂದು ಹೋರಾಟ ಮಾಡಿ ಅದರ ಬದಲು ಸಣ್ಣ ಕಳ್ಳ ದೊಡ್ಡ ಕಳ್ಳನಿಗೆ ಬೆಂಬಲ ನೀಡಿದ್ರೆ ಹೇಗೆ? ಈಗ ಕಾಂಗ್ರೆಸ್ ಪ್ರತಿಭಟನೆ ಆ ರೀತಿ ಇದೆ ಎಂದು ಗೇಲಿ ಮಾಡಿದರು.
ಬಿಜೆಪಿ ನಾಯಕರು ಚರ್ಚೆಗೆ ಬರಲಿ ಎಂಬ ಡಿಕೆಶಿ ಸವಾಲನ್ನು ಸ್ವೀಕರಿಸಿದ್ದೇನೆ. ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ಸಿ.ಟಿ ರವಿ ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ಶಾಸಕರು ಬೇಸರ ಆಗಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನೂ ತೃಪ್ತಿ ಮಾಡೋಕೆ ಆಗಲ್ಲ. ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದರು.
ಒಕ್ಕಲಿಗರು ಸಣ್ಣ ಮನಃಸ್ಥಿತಿಯಿಂದ ಯೋಚನೆ ಮಾಡೋಲ್ಲ. ಒಕ್ಕಲಿಗರು ಭ್ರಷ್ಟಾಚಾರ ಬಯಸುವುದಿಲ್ಲ. ಒಕ್ಕಲಿಗರು ಇಷ್ಟಪಡುವುದು ಸರ್ವಹಿತ ರಾಜಕೀಯವನ್ನು, ಒಕ್ಕಲಿಗರು ಎಲ್ಲರಿಗೂ ದಾನ ಮಾಡುತ್ತಾರೆ. ನನಗೆ ನನ್ನ ಸಮುದಾಯದ ಮೇಲೆ ಗೌರವವಿದೆ. ಅಷ್ಟೇ ಅಲ್ಲ ಎಲ್ಲ ಸಮುದಾಯವನ್ನು ಇಷ್ಟಪಡುತ್ತೇನೆ. ನೀತಿ ರಾಜಕೀಯದಿಂದ ಜಾತಿ ಸಮುದಾಯ ಉದ್ಧಾರ ಆಗಿದೆಯೇ ವಿನಃ ಜಾತಿ ಹೆಸರಿನಿಂದ ಯಾವ ಜಾತಿಯೂ ಉದ್ಧಾರ ಆಗಿಲ್ಲ ಎಂದರು.
ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಫ್ಲೆಕ್ಸ್ ಹಾಕುವಂತೆ ನಾನು ಯಾರಿಗೂ ಹೇಳಿಲ್ಲ. ಫ್ಲೆಕ್ಸ್ ಹಾಕುವುದನ್ನು ಸಮರ್ಥಿಸುವುದೂ ಇಲ್ಲ. ಫ್ಲೆಕ್ಸ್ ಹಾಕಿರುವವರ ಮೇಲೆ ಕಾನೂನು ಕ್ರಮ ಆಗಲಿ ಎಂದರು.
ಗೋವಾದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಬಾರ್ ನಡೆಸುತ್ತಿರುವ ಕಾಂಗ್ರೆಸ್ ಆರೋಪ ಸುಳ್ಳು, ಸ್ಮೃತಿ ಇರಾನಿ ರಾಹುಲ್‌ಗಾಂಧಿ ಅವರನ್ನು ಸೋಲಿಸಿದರು ಎಂಬ ಕಾರಣಕ್ಕೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದರು.