ರಾಜಕಾರಣಕ್ಕೆ ಗೋಹತ್ಯೆ ನಿಷೇಧ: ಡಿಕೆಶಿ ಟೀಕೆ

ಬೆಂಗಳೂರು, ಜ. ೬- ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡುವ ಅವಶ್ಯಕತೆ ಇರಲಿಲ್ಲ. ಮೊದಲಿನಿಂದಲೂ ಕಾಯ್ದೆ ಇತ್ತು. ರಾಜಕಾರಣಕ್ಕಾಗಿ ಹೊಸ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಗಳೂರಿನ ಬಂಟ್ವಾಳದಲ್ಲಿಂದು ನಡೆದ ಮೈಸೂರು ವಿಭಾಗೀಯ ಮಟ್ಟದ ಕಾಂಗ್ರೆಸ್‌ನ ಸಂಕಲ್ಪ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಮಾತೆಗೆ ಪ್ರತಿಯೊಬ್ಬರೂ ಗೌರವ ನೀಡುತ್ತಾರೆ. ನಮ್ಮ ಸಂಸ್ಕೃತಿಯಲ್ಲೇ ಅದು ನಡೆದು ಬಂದಿದೆ ಎಂದರು.
ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡುವ ಅಗತ್ಯ ಇರಲಿಲ್ಲ. ತಾಕತ್ತಿದ್ದರೆ ಗೋಮಾಂಸ ರಫ್ತನ್ನು ನಿಷೇಧಿಸಲಿ ಎಂದು ಅವರು ಸವಾಲು ಹಾಕಿದರು.
ಬಿಜೆಪಿ ಸರ್ಕಾರ ಪ್ರತಿ ರೈತರಿಗೆ ೨೫ ರಿಂದ ೫೦ ಸಾವಿರ ರೂ. ಪರಿಹಾರ ನೀಡಿ ವಯಸ್ಸಾದ ಹಸುಗಳನ್ನು ಖರೀದಿಸಿ ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ಆಗ್ರಹಿಸಿದರು.
ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸಿದ್ದರಾಮಯ್ಯನವರು ಹೇಳಿರುವ ಮಾತುಗಳು ಅವರ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಪಕ್ಷದಲ್ಲಿ ಕೆಲ ವಿಚಾರಗಳ ಬಗ್ಗೆ ವೈಯುಕ್ತಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪೇನಲ್ಲ ಎಂದರು.
ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತ ಆಧಾರಿತ ಪಕ್ಷವನ್ನಾಗಿ ಪರಿವರ್ತಿಸುವ ಸಂಕಲ್ಪದೊಂದಿಗೆ ರಾಜ್ಯಾದ್ಯಂತ ವಿಭಾಗೀಯ ಮಟ್ಟದ ಸಂಕಲ್ಪ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ವಿಭಾಗಗಳಲ್ಲೂ ಕಾರ್ಯಕರ್ತರ, ಮುಖಂಡರ ಸಮಾವೇಶ ನಡೆಸುತ್ತಿದ್ದೇನೆ. ಇಂದು ಬಂಟ್ವಳದಲ್ಲಿ ಸಮಾವೇಶ ನಡೆದಿದೆ. ಪ್ರತಿಯೊಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಮಾತನಾಡಲು ಅವಕಾಶ ನೀಡಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದರು.
ಯಾವುದೇ ಪಕ್ಷದಲ್ಲಿ ಕಾರ್ಯಕರ್ತರೇ ಮುಖ್ಯ. ಹಾಗಾಗಿ ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾದರೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ದ ಹೋರಾಡಲು ಸಾಧ್ಯ. ಸ್ಥಳೀಯ ಮಟ್ಟದಲ್ಲಿರುವ ಸಮಸ್ಯೆಗಳನ್ನು ಆಲಿಸಿ ಮುಂದೆ ಪಕ್ಷ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಿದೆ ಎಂದರು.
೨೦೨೧ನ್ನು ಹೋರಾಟದ ವರ್ಷ, ಪಕ್ಷ ಸಂಘಟನೆಯ ವರ್ಷ ಎಂದು ಘೋಷಣೆ ಮಾಡಿದ್ದೇವೆ. ಅದರಂತೆ ಎಲ್ಲ ಬ್ಲಾಕ್ ಅಧ್ಯಕ್ಷರುಗಳ, ಕ್ಷೇತ್ರಗಳ ಸಮಸ್ಯೆಗಳನ್ನು ಚರ್ಚಿಸಲು ವಿಭಾಗೀಯ ಸಂಕಲ್ಪ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದರು.
ಇಂದು ಬಂಟ್ವಳದಲ್ಲಿ ಸಂಕಲ್ಪ ಸಮಾವೇಶ ನಡೆದಿದ್ದು, ಜನವರಿ ೮ ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ, ನಂತರ ಹುಬ್ಬಳ್ಳಿಯಲ್ಲಿ ಜನವರಿ ೧೧ ರಂದು ಬೆಳಗಾವಿ ವಿಭಾಗದ ಸಂಕಲ್ಪ ಸಭೆ, ಜ. ೧೮ ರಂದು ಗುಲ್ಬರ್ಗಾದಲ್ಲಿ ವಿಭಾಗೀಯ ಸಂಕಲ್ಪ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
ರಾಜ್ಯದ ಸಮಸ್ಯೆಗಳು ಬೇರೆ, ಸ್ಥಳೀಯ ಸಮಸ್ಯೆಗಳು ಬೇರೆ. ಹಾಗಾಗಿ ಬ್ಲಾಕ್ ಅಧ್ಯಕ್ಷರ ಅಭಿಪ್ರಾಯಗಳನ್ನು ಆಲಿಸಿ ಅವರು ಹೇಳುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.