
ಕೋಲಾರ,ನ,೧೨-ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಐದು ಗ್ಯಾರಂಟಿ ಘೋಷಣೆ ಬಳಿಕ ಅಭಿವೃದ್ದಿ ಕಾರ್‍ಯಗಳಿಗೆ ಹಣವಿಲ್ಲದೆ ಅಭಿವೃದ್ದಿ ಎಂಬುದು ಸಂಪೂರ್ಣವಾಗಿ ಕುಠಿತವಾಗಿದೆ ಎಂದು ವಿರೋಧ ಪಕ್ಷಗಳ ಆರೋಪ ಮಾಡುತ್ತಿದ್ದಾರೆ, ಅವರು ಒಮ್ಮೆ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳನ್ನು ಕಣ್ಣು ತೆರೆದು ನೋಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ತಾಲೂಕಿನ ಯರಗೋಳ್ ಗ್ರಾಮದಲ್ಲಿ ಮೂರು ತಾಲೂಕಿನ ಜನರಿಗೆ ಕುಡಿಯುವ ನೀರಾವರಿ ಯೋಜನೆಯಾದ ಯರಗೋಳ್ ಅಣೆಕಟ್ಟು ಯೋಜನೆಯನ್ನು ಲೋಕಾರ್ಪಣೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ೨೨೬೩ ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ಸರ್ಕಾರದಲ್ಲಿ ಹಣವಿಲ್ಲದಿದ್ದರೆ ಇಷ್ಟು ಮೊತ್ತದ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದರೂ ಅಭಿವೃದ್ದಿ ಪರ್ವ ನಿಂತಿಲ್ಲ ವಿಪಕ್ಷಗಳು ಬರೀ ರಾಜಕಾರಣಕ್ಕಾಗಿ ಟೀಕೆ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆ ಜಾರಿ ಮಾಡಿದ್ದು ಯಾರು ? ಟೀಕೆ ಮಾಡುವವರು ಈ ಯೋಜನೆ ಜಾರಿಯೇ ಆಗಲ್ಲ ಎನ್ನುತ್ತಿದ್ದವರೇ ಎಂದು ಟೀಕಿಸಿ ಈ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಟಾನಕ್ಕೆ ತಂದು ಈ ಜಿಲ್ಲೆಗಳಿಗೆ ಎತ್ತಿನ ಹೊಳೆಯ ನೀರನ್ನು ಈ ಅವಧಿಯಲ್ಲೆ ಅನುಷ್ಟಾನ ಮಾಡಿಯೇ ತೀರುವೆ ಎಂದು ಘೋಷಿಸಿದರು.
ಕೋಲಾರ ಜಿಲ್ಲೆ ಹೆಚ್ಚಿನ ಕೆರೆಗಳನ್ನು ಹೊಂದಿದೆ ಅವುಗಳನ್ನು ಕೆಸಿ ವ್ಯಾಲಿ ನೀರು ಹರಿಸುವ ಮೂಲಕ ತುಂಬಿಸಿದ್ದು ಯಾರು ವಿಪಕ್ಷಗಳು ಕೆಸಿ ವ್ಯಾಲಿ ನೀರನ್ನು ಜಿಲ್ಲೆಗೆ ತರಲು ಎಲ್ಲಾ ಶಾಸಕರು ಒಗ್ಗಟ್ಟಾಗಿ ಶ್ರಮಿಸಿದ ಫಲ ಇಂದು ಕೆರೆಗಳಲ್ಲಿ ನೀರು ತುಂಬಿದೆ.
ಕೆಸಿ ವ್ಯಾಲಿ ನೀರು ಜಿಲ್ಲೆಗೆ ಹರಿಸಿ ಕುಡಿಯುವ ನೀರಿನ ಭವಣೆ ನೀಗಿಸಲು ಮುಂದಾದಾಗ ಹೆಚ್.ಡಿ.ಕುಮಾರಸ್ವಾಮಿ ವಿರೋಧಿಸಿದರು ಅದು ವಿಷ ಎಂದು ಜನರಲ್ಲಿ ತಪ್ಪು ಭಾವನೆ ಬರುವಂತೆ ಮಾಡಿದರು, ಈಗ ಕೆರೆಗಳು ತುಂಬಿದೆ ಯಾರಾದರು ಸತ್ತರೆ? ಜಾನುವಾರುಗಳು ಸತ್ತಿದೇಯೇ? ಎಂದು ಪ್ರಶ್ನಿಸಿದರು.
ಕೆಸಿ ವ್ಯಾಲಿ ನೀರನ್ನು ವಿಶ್ವಸಂಸ್ಥೆ ಪರಿಶೀಲಿಸಿದ ನಂತರೇ ಹರಿಸಲಾಗಿದೆ ಅವರೂ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ, ಇದನ್ನು ತಿಳಿಯದೆ ರಾಜಕೀಯ ಲಾಭಕ್ಕಾಗಿ ಟೀಕೆ ಮಾಡುವುದು ಸರಿಯಿಲ್ಲ, ಪ್ರಜಾಪ್ರಬುತ್ವದಲ್ಲಿ ನೀವೇ ಮಾಲೀಕರು ನಿಮ್ಮ ಸಮಸ್ಯೆಗಳನ್ನು ನಿವಾರಿಸುವುದೇ ನಮ್ಮ ಕರ್ತವ್ಯವಾಗಿದೆ ಎಂಬುದನ್ನು ಜನಪ್ರತಿನಿಧಿಗಳನ್ನು ಅರ್ಥಮಾಡಿಕೊಳ್ಳಬೇಕೆ ವಿನಃ ಜನರನ್ನು ದಾರಿ ತಪ್ಪಿಸಬಾರದು ಎಂದರು.ಕೆಜಿಎಫ್‌ನಲ್ಲಿ ಬಿಇಎಂಎಲ್‌ನಲ್ಲಿರುವ ೯೬೦ ಎಕರೆಯನ್ನು ಸರ್ಕಾರ ವಾಪಸ್ ಪಡೆದು ಇಂಡಸ್ಟ್ರೀಯಲ್ ಟೌನ್ ಶಿಪ್ ಮಾಡಿಸುವುದಾಗಿ ಭರವಸೆ ನೀಡಿದರು.
ಸಚಿವರಾದ ಭೈರತಿ ಸುರೇಶ್, ರಾಮಲಿಂಗೇಗೌಡ, ಕೃಷ್ಣಬೈರೇಗೌಡ, ಎಂ.ಸಿ.ಸುಧಾಕರ್, ಕೆ.ಜೆ.ಜಾರ್ಜ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ವೆಂಕಟಶಿವಾರೆಡ್ಡಿ, ರೂಪಕಲಾಶಶಿಧರ್, ಕೆ.ವೈ.ನಂಜೇಗೌಡ, ಕೊತ್ತರೂ ಮಂಜುನಾಥ್, ಸಮೃದ್ದಿ ಮಂಜುನಾಥ್, ಎಂಎಲ್‌ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂಪಾಷಾ, ಜಿಪಂ ಸಿಇಓ ಪದ್ಮ ಬಸಂತಪ್ಪ, ತಹಸೀಲ್ದಾರ್ ರಶ್ಮಿ ಇದ್ದರು.