ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

ಅಥಣಿ :ಆ.31: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವವು ಇಂದಿನಿಂದ ಸೆ.2 ರವರೆಗೆ ಸ್ಥಳೀಯ ಶ್ರೀ ರಾಘವೇಂದ್ರ ಮಠದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಉತ್ಸವ ಕಮೀಟಿ ಅಧ್ಯಕ್ಷ ಎಲ್.ವ್ಹಿ.ಕುಲಕರ್ಣಿ ತಿಳಿಸಿದ್ದಾರೆ.
ಇಂದು ಸಾಯಂಕಾಲ 6 ಗಂಟೆಗೆ ಅಥಣಿಯ ವಾದಿರಾಜ ಜಂಬಗಿ ಇವರಿಂದ ಶ್ರೀ ಹರಿ ಕೀರ್ತನೆ ಹಾಗೂ ರಾತ್ರಿ 8 ಗಂಟೆಗೆ ಬೆಂಗಳೂರಿನ ಅರ್ಚನಾ ಕುಲಕರ್ಣಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ, ಸೆ.1 ರಂದು ಸಾಯಂಕಾಲ 6 ಗಂಟೆಗೆ ಹುಬ್ಬಳ್ಳಿಯ ಪ್ರೇರಣಾ ಕಲಾ ಬಳಗದ ಶ್ರೀಮತಿ ಜ್ಯೋತಿ ಗಲಗಲಿ ಇವರಿಂದ ಭರತ ನಾಟ್ಯ ಹಾಗೂ ರೂಪಕ ಹಾಗೂ ರಾತ್ರಿ 8 ಗಂಟೆಯಿಂದ ವಿಜಯಪುರದ ಶ್ರೀಮತಿ ನರಸಿಂಹ ಜೋಶಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಹಾಗೂ ಸೆ.2 ಶನಿವಾರದಂದು ಮುಂಜಾನೆ 11 ಗಂಟೆಗೆ ಪವಮಾನ ಹೋಮ ಹಾಗೂ ವಿಜ್ರಂಭಣೆಯಿಂದ ರಥೋತ್ಸವ ನಡೆಯಲಿದೆ ಇದೇ ದಿನ ಸಾಯಂಕಾಲ 6 ಗಂಟೆಗೆ ರಾಮಚಂದ್ರ ಖಾಸನಿಸ್ ಮತ್ತು ಸಂಗಡಿಗರಿಂದ ಶತಪದ ಗಾನ ಸಾಹಸಿಯರಿಂದ ಭಜನೆ ಮತ್ತು ರಾತ್ರಿ 8 ಗಂಟೆಗೆ ಅಥಣಿಯ ರಾಮ ಜೋಶಿ ಇವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಮುಂಜಾನೆ 4 ಗಂಟೆಗೆ ಸುಪ್ರಭಾತ, 8 ರಿಂದ ಅಷ್ಟೋತ್ತರ, ಪಂಚಾಮೃತ, ಅಭಿಷೇಕ, ಪೂಜೆ, 9 ರಿಂದ ಪುರಾಣ, ಶ್ರೀ ರಾಯರ ಸ್ತೋತ್ರದ ಅರ್ಥನುವಾದ, ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಗಾಯನ ಮತ್ತು ಭಜನೆ, 1 ಗಂಟೆಯಿಂದ 4 ಗಂಟೆಯವರೆಗೆ ಅನ್ನ ಪ್ರಸಾದ ವಿತರಣೆ ಮತ್ತು ಸಾಯಂಕಾಲ 5 ರಿಂದ ತಾರತಮ್ಯ ಭಜನೆ, ಪಲ್ಲಕ್ಕಿ ಸೇವೆ, ಮಂತ್ರ ಪುಷ್ಪ, 6 ಗಂಟೆಯಿಂದ ಹರಿ ಕೀರ್ತನೆ, ಭರತ ನಾಟ್ಯ, ರೂಪಕಗಳು, ಭಜನೆ ಮತ್ತು ರಾತ್ರಿ 8.30 ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಒಟ್ಟು ಮೂರು ದಿನಗಳ ಕಾಲ ವಿಜ್ರಂಭಣೆಯಿಂದ ನಡೆಯಲಿರುವ ಆರಾಧನಾ ಮಹೋತ್ಸವದಲ್ಲಿ ಮುಂಬೈ, ಬೆಂಗಳೂರು, ಪುಣೆ ಸೇರಿದಂತೆ ಅನೇಕ ಸ್ಥಳಗಳಿಂದ ನೂರಾರು ಭಕ್ತರು ಭಕ್ತಿಯಿಂದ ಪಾಲ್ಗೊಳ್ಳುವರು ಮತ್ತು ಸಾಮರಸ್ಯದಿಂದ ನಡೆಯಲಿರುವ ಈ ಉತ್ಸವದಲ್ಲಿ ಎಲ್ಲರೂ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮೂರೂ ದಿನ ಅನ್ನ ಪ್ರಸಾದ ಸ್ವೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.