ರಾಗಿ ಮೆಂತೆ ಮುದ್ದೆ

ಬೇಕಾಗುವ ಪದಾರ್ಥಗಳು
ರಾಗಿ ಎರಡು ಬಟ್ಟಲು
ಮೆಂತೆ ಕಾಳು ಎರಡು ಸ್ಪೂನ್
ಏಲಕ್ಕಿ, ಲವಂಗ,
ಅರಿಷಿಣ, ಶುಂಠಿ ಪುಡಿ
ತುಪ್ಪ
ತಯಾರಿಸುವ ವಿಧಾನ
ಹಿಂದಿನ ರಾತ್ರಿಯೇ ರಾಗಿ ಮತ್ತು ಮೆಂತೆ ಕಾಳುಗಳನ್ನು ತೊಳೆದು ಒಂದು ಬಟ್ಟೆಯಲ್ಲಿ ಮೊಳಕೆ ಬರಲು ಬಿಡಿ. ಮರುದಿನ ಬೆಳಿಗ್ಗೆ ತಾರಸಿ ಮೇಲೆ ಒಣ ಬಟ್ಟೆಯ ಮೇಲೆ ರಾಗಿ ಮತ್ತು ಮೆಂತೆಯನ್ನು ಹರವಿ ಚೆನ್ನಾಗಿ ಒಣಗಿಸಿ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಅಗಲ ತಳವಿರುವ ನಾನ್ ಸ್ಟಿಕ್ ಪಾತ್ರೆಯಲ್ಲಿ ಮೂರು ಲೋಟದಷ್ಟು ನೀರು ಹಾಕಿ ಅದಕ್ಕೆ ಪುಡಿ ಮಾಡಿಟ್ಟುಕೊಂಡ ಏಲಕ್ಕಿ, ಲವಂಗ, ಅರಿಷಿಣ ಮತ್ತು ಶುಂಠಿ ಪುಡಿಯನ್ನು ಹಾಕಿ ವಾಸನೆ ಪಕ್ಕದ ಮನೆ ತಲುಪುವವರೆಗೆ ಕುದಿಸಿರಿ. ನಂತರ ಅದಕ್ಕೆ ಪುಡಿ ಮಾಡಿಟ್ಟುಕೊಂಡ ರಾಗಿ-ಮೆಂತೆ ಹಿಟ್ಟನ್ನು ನಿಧಾನವಾಗಿ ಸುರಿಯುತ್ತ ಮಾಮೂಲಿ ರಾಗಿ ಮುದ್ದೆ ಮಾಡುವಂತೆ ಕಟ್ಟಿಗೆಯ ಕೈಯಿಂದ ತಿರುವಲು ಶುರು ಮಾಡಿ. ನೀರಿನ ಜೊತೆ ಹಿಟ್ಟು ಚೆನ್ನಾಗಿ ಕೂಡಿಕೊಂಡು ಚೆನ್ನಾಗಿ ಕುದ್ದನಂತರ ಮಂದ ಗತಿಯಲ್ಲಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಕೈಗೆ ತುಪ್ಪ ಸವರಿ ಹಿಟ್ಟನ್ನು ಮುದ್ದೆಯಂತೆ ಮಾಡಿ ಬಿಸಿಬಿಸಿಯಿರುವಾಗಲೇ ಕಾಳಿನ ಸಾರು ಅಥವಾ ಹುಣಸೆ ಗೊಜ್ಜಿನೊಂದಿಗೆ ಗುಳುಂಗುಳುಂ ಮಾಡಿ. ರಾಗಿ ಮೆಂತೆ ಮುದ್ದೆ ಮೇಲೆ ಎರಡು ಚಮಚ ತುಪ್ಪ ಸುರುವಿದರೆ ನುಂಗಲು ಸುಲಭವಾಗುತ್ತದೆ. ಮೆಂತೆ ಹಾಕಿದ್ದರಿಂದ ಸ್ವಲ್ಪ ಕಹಿ ಅನಿಸಬಹುದು. ಆದರೆ, ಪರವಾಗಿಲ್ಲ ಮುದ್ದೆ ನುಂಗಿ ಆರೋಗ್ಯ ಚೆನ್ನಾಗಿಟ್ಟುಕೊಳ್ಳಿ.