ರಾಗಿ ಮುದ್ದೆ ನಾಟಿ ಕೋಳಿ ಸಾರು

ಬೇಕಾಗುವ ಸಾಮಗ್ರಿಗಳು
*ನಾಟಿಕೋಳಿ ಮಾಂಸ – ೧/೨ ಕೆ.ಜಿ
*ಅಚ್ಚಖಾರದ ಪುಡಿ – ೧ ಚಮಚ
*ಧನಿಯಾ ಪುಡಿ -೧ ಚಮಚ
*ಚಕ್ಕೆ – ೨
*ಲವಂಗ – ೩
*ಏಲಕ್ಕಿ – ೩
*ಗಸಗಸೆ – ೧ ಚಮಚ
*ತೆಂಗಿನ ಕಾಯಿ ತುರಿ – ೧/೨ ಕಪ್
*ಈರುಳ್ಳಿ – ೨
*ತುಪ್ಪ – ೫ ಚಮಚ
*ಎಣ್ಣೆ – ೧೦೦ ಗ್ರಾಂ
*ರಾಗಿ ಹಿಟ್ಟು – ೧ ಕಪ್

ಮಾಡುವ ವಿಧಾನ :

ಕಡಾಯಿಗೆ ತುಪ್ಪ ಹಾಕಿ. ಕಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ ಫ್ರೈ ಮಾಡಿ ತಗೆದಿಟ್ಟುಕೊಳ್ಳಿ. ಅದೇ ತುಪ್ಪಕ್ಕೆ ಹೆಚ್ಚಿದ ಈರುಳ್ಳಿ ಕೆಂಪಗೆ ಹುರಿದು ಇದಕ್ಕೆ ಗಸಗಸೆ ಹಾಕಿ ಫ್ರೈ ಮಾಡಿ ನಂತರ ತೆಂಗಿನಕಾಯಿ ತುರಿ, ಅಚ್ಚಖಾರದ ಪುಡಿ, ಧನಿಯಾ ಪುಡಿಯನ್ನು ಹುರಿದುಕೊಳ್ಳಿ. ತಣ್ಣಗಾದ ನಂತರ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಡಿ. ಕುಕ್ಕರ್‌ಗೆ ಎಣ್ಣೆ, ತುಪ್ಪ ಹಾಕಿ. ಕಾದ ಮೇಲೆ ನಾಟಿ ಕೋಳಿ ಮಾಂಸವನ್ನು ಹಾಕಿ ಹದವಾಗಿ ಹುರಿದುಕೊಳ್ಳಿ. ರುಬ್ಬಿಟ್ಟುಕೊಂಡ ಮಸಾಲೆ, ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಾಡಿಸಿ, ೪ ವಿಷಲ್ ಕೂಗಿಸಿ. ಈಗ ರುಚಿಯಾದ ನಾಟಿ ಕೋಳಿಸಾರು ಸವಿಯಲು ಸಿದ್ಧ.
ಪಾತ್ರೆಗೆ ನೀರು, ಎಣ್ಣೆ ಹಾಕಿಕೊಂಡು ಕುದಿಯುವ ನೀರಿಗೆ ರಾಗಿ ಹಿಟ್ಟು ಹಾಕಿ, ಅಂಟಾಗದಂತೆ ಚೆನ್ನಾಗಿ ತಿರುವಿ ತೆಗೆದು, ತಟ್ಟೆಗೆ ಹಾಕಿಕೊಳ್ಳಿ. ತಣ್ಣೀರಿನಲ್ಲಿ ಕೈ ಅದ್ದಿಕೊಳ್ಳುತ್ತಾ ಮುದ್ದೆಯನ್ನು ಉಂಡೆ ಮಾಡಿದರೆ ರಾಗಿಮುದ್ದೆ ರೆಡಿ.