
ಕುಣಿಗಲ್, ಸೆ. ೧೬- ಮಾರ್ಕೋನಹಳ್ಳಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಮುಂಗಾರು ಅಲ್ಪ ಬೆಳೆ ರಾಗಿ ಬೆಳೆಯಲು ಸೆ. ೨೨ ರಿಂದ ನೀರು ಹರಿಸಲು ಶಾಸಕ ಡಾ.ಎಚ್. ಡಿ. ರಂಗನಾಥ್ ತೀರ್ಮಾನ ಕೈಗೊಂಡರು.
ತಾಲ್ಲೂಕಿನ ಮಾರ್ಕೊನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಎಡೆಯೂರು ಹೇಮಾವತಿ ನಾಲಾ ವಿಭಾಗ ಕಾವೇರಿ ನೀರಾವರಿ ನಿಗಮ ೨೦೨೩- ೨೪ನೇ ಸಾಲಿನ ನೀರಾವರಿ ಸಲಹಾ ಸಮಿತಿಯು ಮಾರ್ಕೋನಹಳ್ಳಿ . ಮಂಗಳ ಜಲಾಶಯ, ಮುತ್ತುರಾಯನಕೆರೆ ಮತ್ತು ಕೆ. ವನ ಮಚನಹಳ್ಳಿ ಕೆರೆಗಳ ಅಚ್ಚುಕಟ್ಟುದಾರರ ರೈತರ ಸಭೆಯು ತುಮಕೂರು ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ರೈತರ, ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಗಳ ಜಲಾಶಯ, ಮುತ್ತುರಾಯನಕೆರೆ ಹಾಗೂ ವ್ಯಾಪ್ತಿಯ ನಾಗಮಂಗಲ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶಗಳಿಗೆ ಜಮೀನುಗಳಿಗೆ ಮಾರ್ಕೊನಹಳ್ಳಿ ಜಲಾಶಯದಿಂದ ಅಲ್ಪಾವಧಿ ರಾಗಿ ಬೆಳೆಯಲು ಬರುವ ಸೆ.೨೨ ರಿಂದ ಮಾರ್ಕೋನಹಳ್ಳಿ ಜಲಾಶಯದಿಂದ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ೨೦ ದಿನಗಳ ಕಾಲ ನೀರು ಹರಿಸಿ ನಂತರ ೧೦ ದಿನಗಳಿಗೊಮ್ಮೆ ನೂರು ದಿನಗಳ ಕಾಲ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಯಿತು.
ಶಾಸಕ ಡಾ. ರಂಗನಾಥ್ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಮಳೆಯು ದುರ್ಬಲವಾಗಿದ್ದು ಈಗಾಗಲೇ ಸಾಕಷ್ಟು ಮಳೆ ಇಲ್ಲದೆ ಅಭಾವ ಸೃಷ್ಟಿಯಾಗಿದ್ದು ರಾಜ್ಯ ಸರ್ಕಾರ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಾರ್ಕೋನಹಳ್ಳಿ ಜಲಾಶಯದಲ್ಲಿ ಈಗ ೮೭. ೨೨ ಅಡಿಗಳಷ್ಟು ನೀರು ಇದ್ದು, ರಾಗಿ ಬೆಳೆಗೆ ೧,೪೬೪ ಎಂಸಿಎಫ್‌ಟಿ ನೀರು ಬೇಕಾಗಿದ್ದು ರೈತರು ಸಮರ್ಪಕವಾಗಿ ನೀರು ಬಳಸಿಕೊಳ್ಳುವ ಮೂಲಕ ತಮ್ಮ ಬದುಕು ಅಸನುಗೊಳಿಸಿಕೊಳ್ಳಬೇಕು. ರೈತರ ಅಚ್ಚುಕಟ್ಟು ಪ್ರದೇಶದ ೫. ೯೬೨ ಹೆಕ್ಟೇರ್ ಪ್ರದೇಶಗಳಿಗೆ ನೀರು ಹರಿಸಬೇಕಾಗಿದ್ದು ಕೆಳ ಹಂತದವರೆಗೂ ಮೊದಲೇ ಹಂತದಲ್ಲಿ ೨೦ ದಿನಗಳು ಬಿಡುವ ಮೂಲಕ ರೈತರು ನಾಟಿ ಮಾಡಿಕೊಳ್ಳುವ ಮೂಲಕ ರಾಗಿ ಬೆಳೆಯಲು ಅವಕಾಶ ಕಲ್ಪಿಸಲಾಗುವುದು ನಂತರ ೧೦ ದಿನಗಳಿಗೊಮ್ಮೆ ನೀರು ಹರಿಸಲಾಗುವುದು. ರೈತರ ರಕ್ಷಣೆ ಮುಖ್ಯವಾಗಿದ್ದು, ಯಾವುದೇ ಗೊಂದಲವಿಲ್ಲದೆ ಸಮರ್ಪಕವಾಗಿ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂದು ರೈತರಿಗೆ ಕಿವಿ ಮಾತು ಹೇಳಿದರು.
ನಾಗಮಂಗಲ ಭಾಗದ ಗಡಿ ಅಚ್ಚುಕಟ್ಟು ಪ್ರದೇಶದ ರೈತರಿಗೂ ಇದರಿಂದ ಅನುಕೂಲ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ವಿಶ್ವನಾಥ್, ಡಿವೈಎಸ್‌ಪಿ ಲಕ್ಷ್ಮಿಕಾಂತ್, ಹೇಮಾವತಿ ನಾಲಾ ವಿಭಾಗ ಎಡೆಯೂರು ಕಾರ್ಯಪಾಲಕ ಅಭಿಯಂತರರಾದ ಶ್ರೀನಿವಾಸ್, ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆರ್. ರಂಗನಾಥ್, ಅಮೃತೂರು ಸಹಾಯಕ ಕಾರ್ಯಪಾಲಕ ಅಭಿಯಂತರ ರುದ್ರೇಶ್, ಅಮೃತೂರು ಪಿಎಸ್‌ಐ ಶಮಂತ್‌ಗೌಡ, ಇಂಜಿನಿಯರ್ ಗೋವಿಂದೇಗೌಡ, ಬೆನವಾರ ಶೇಷಣ, ಗಿರೀಶ್, ನಂಜೇಗೌಡ, ಹರೀಶ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.