ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರವಾಗಿದ್ದು, ಇದನ್ನು ಬಳಕೆ ಮಾಡುವ ಮೂಲಕ ಆರೋಗ್ಯ ವೃದ್ಧಿಗೊಳಿಸುವುದು ಮಾತ್ರವಲ್ಲದೇ ರೋಗ ಬರದಂತೆ ಕೂಡಾ ತಡೆಗಟ್ಟುವಲ್ಲಿ ರಾಗಿ ಪ್ರಮುಖ ಪಾತ್ರ ವಹಿಸುತ್ತದೆ.
ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ಕಡಿಮೆಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿರುವುದರಿಂದ ರಾಗಿಯಲ್ಲಿರುವ ಫೈಬರ್ ಅಂಶವು ೩೦% ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.
ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆಯು ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕವೂ ಹೌದು. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.
ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ. ಇದರಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ಇದು ತಗ್ಗಿಸುತ್ತದೆ. ಕಡಿಮೆ ಫೈಬರ್‌ಯುಕ್ತ ಆಹಾರದ ಸೇವನೆಯಿಂದಾಗಿ ಅತಿಸಾರ, ಮಲಬದ್ಧತೆ, ಗ್ಯಾಸ್ ಮುಂತಾದ ಜೀರ್ಣಕಾರಿ ಸಮಸ್ಯೆಯಾಗುತ್ತದೆ. ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.
ಮಧುಮೇಹವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿರುವ ರೋಗವಾಗಿದೆ. ರಾಗಿಯಲ್ಲಿ ಕಂಡುಬರುವ ಮೆಗ್ನೀಷಿಯಂ ಅಂಶವು ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲುಕೋಸ್‌ಗಳ ದಕ್ಷತೆಯನ್ನು ಹೆಚ್ಚಿಸುವಂತಹ ಪ್ರಮುಖ ಖನಿಜಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ರಾಗಿಯನ್ನು ಸೇವಿಸುವ ಜನರಲ್ಲಿ ೩೦% ದಷ್ಟು ಮಧುಮೇಹ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ರಾಗಿಯನ್ನು ಗಂಜಿ, ರಾಗಿ ಅಂಬಲಿ, ರಾಗಿ ಮುದ್ದೆ, ಮತ್ತು ರಾಗಿಯನ್ನ ಪುಡಿ ಮಾಡಿಕೊಂಡು ಹಾಲಿನಲ್ಲಿ ಬೆರೆಸಿ ಹೀಗೆ ಹಲವಾರು ವಿಧಗಳಲ್ಲಿ ನಾವು ನಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು. ಇಷ್ಟೆಲ್ಲ ಆರೋಗ್ಯಕ್ಕೆ ಅವಶ್ಯಕವಾಗಿರುವ ಅಂಶ ಹೊಂದಿರುವ ರಾಗಿಯನ್ನು ಬಳಸಿ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.